ಖಾಲಿ ಮನೆಗೆ ಬೆಂಕಿ, ₹10 ಲಕ್ಷ ನಷ್ಟ – ಕಳವು ಶಂಕೆ

0
87

ಪುತ್ತೂರು : ಕಸಬಾ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಖಾಲಿ ಮನೆಯೊಂದಕ್ಕೆ ಬೆಂಕಿ ತಗುಲಿ ಸುಮಾರು ₹10 ಲಕ್ಷ ನಷ್ಟ ಸಂಭವಿಸಿರುವ ಘಟನೆ ಬೆಳಕಿಗೆ ಬಂದಿದೆ. ಇದೇ ವೇಳೆ ಮನೆಯಲ್ಲಿದ್ದ ಸುಮಾರು ₹30 ಸಾವಿರ ಮೌಲ್ಯದ ವಸ್ತುಗಳು ಕಳವಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಮನೆಯ ಮಾಲಕಿ ರಶ್ಮಿ ಬಿ. ಭಟ್ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾಸರಗೋಡಿನಲ್ಲಿ ವಾಸವಿರುವ ರಶ್ಮಿ ಬಿ. ಭಟ್ ಅವರು ಸೆಪ್ಟೆಂಬರ್ 15ರಂದು ಕೊನೆಯದಾಗಿ ಮನೆಗೆ ಭೇಟಿ ನೀಡಿದ್ದರು. ಅಕ್ಟೋಬರ್ 11ರಂದು ಬೆಳಗ್ಗೆ ಅವರ ದೊಡ್ಡಪ್ಪನ ಮಗ ಎನ್.ಟಿ. ಕಿಶೋರ್ ಕರೆ ಮಾಡಿ ಮನೆಗೆ ಬೆಂಕಿ ತಗುಲಿರುವುದಾಗಿ ಮಾಹಿತಿ ನೀಡಿದ್ದರು. ತಕ್ಷಣ ಪತಿಯೊಂದಿಗೆ ಪುತ್ತೂರಿಗೆ ಆಗಮಿಸಿ ಪರಿಶೀಲಿಸಿದಾಗ, ಮನೆಯ ಹಿಂಭಾಗದಲ್ಲಿದ್ದ ಎರಡು ಮಲಗುವ ಕೋಣೆಗಳು, ಎರಡು ಸ್ನಾನಗೃಹಗಳು ಹಾಗೂ ತೆರೆದ ಹಾಲ್‌ನಂತಿರುವ ಛಾವಣಿಯ ಭಾಗ ಬೆಂಕಿಯಿಂದ ಸುಟ್ಟು ಕರಕಲಾಗಿರುವುದು ಕಂಡುಬಂದಿದೆ.

ಇದಲ್ಲದೆ, ಮನೆಯ ಹಿಂಭಾಗದಲ್ಲಿರುವ ಅಡುಗೆಮನೆಯ ಬಾಗಿಲಿನ ಕೆಳಭಾಗದ ಹಲಗೆಯನ್ನು ತೆಗೆದಿರುವುದು ಹಾಗೂ ವಿದ್ಯುತ್ ಸ್ವಿಚ್‌ಬೋರ್ಡ್‌ಗಳನ್ನು ಜಖಂಗೊಳಿಸಿ ವಿದ್ಯುತ್ ತಂತಿಗಳನ್ನು ಕೊಂಡೊಯ್ದಿರುವುದು ಗಮನಕ್ಕೆ ಬಂದಿದೆ. ಮನೆಯಲ್ಲಿದ್ದ ಐದು ಸೀಲಿಂಗ್ ಫ್ಯಾನ್‌ಗಳು, ಎರಡು ದೊಡ್ಡ ದೀಪಗಳು, ಆರತಿ ಸಾಮಗ್ರಿಗಳು ಹಾಗೂ ಎರಡು ಹಿತ್ತಾಳೆಯ ತಟ್ಟೆಗಳು ಕಾಣೆಯಾಗಿವೆ. ದುರಸ್ತಿಗಾಗಿ ಮನೆಯಲ್ಲಿಟ್ಟಿದ್ದ ಫ್ರಿಡ್ಜ್ ಮತ್ತು ಮೈಕ್ರೋವೇವ್‌ಗಳನ್ನು ಕಳಚಿ ಪರಿಶೀಲಿಸಿರುವ ಗುರುತುಗಳೂ ಪತ್ತೆಯಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸೆಪ್ಟೆಂಬರ್ 15ರ ಸಂಜೆ 4 ಗಂಟೆಯಿಂದ ಅಕ್ಟೋಬರ್ 11ರ ನಸುಕಿನ 2.45 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಮನೆಗೆ ನುಗ್ಗಿ ವಸ್ತುಗಳನ್ನು ಕಳವು ಮಾಡಿರುವ ಶಂಕೆಯನ್ನು ದೂರಿನಲ್ಲಿ ವ್ಯಕ್ತಪಡಿಸಲಾಗಿದೆ. ಕಳವಾದ ವಸ್ತುಗಳ ಅಂದಾಜು ಮೌಲ್ಯ ₹30 ಸಾವಿರವಾಗಿದ್ದು, ಬೆಂಕಿ ಅವಘಡದಿಂದ ಸುಮಾರು ₹10 ಲಕ್ಷ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಮನೆಗೆ ನುಗ್ಗಿ ಕಳವು ಮಾಡಿದವರನ್ನು ಪತ್ತೆಹಚ್ಚಿ, ಕಳವಾದ ವಸ್ತುಗಳನ್ನು ವಶಪಡಿಸಿಕೊಳ್ಳಬೇಕು. ಜೊತೆಗೆ ಮನೆಗೆ ಬೆಂಕಿ ತಗುಲಿರುವ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಶ್ಮಿ ಬಿ. ಭಟ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.