ನಾವೂರು ಕ್ಲಿನಿಕ್ ಅಗ್ನಿಸ್ಪರ್ಶ ಪ್ರಕರಣ ಭೇದಿಸಿದ ಬೆಳ್ತಂಗಡಿ ಪೊಲೀಸರು

0
46

ಬೆಳ್ತಂಗಡಿ : ತಾಲೂಕಿನ ನಾವೂರು ಪೇಟೆಯ ಸ್ವಾತಿ ಕಟ್ಟಡದಲ್ಲಿ ಡಾ. ಪ್ರದೀಪ್ ಅವರು ನಡೆಸುತ್ತಿದ್ದ ಆರೋಗ್ಯ ಕ್ಲಿನಿಕ್‌ಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನಿಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತನನ್ನು ನಾವೂರು ನಿವಾಸಿ ರವಿ ಪೂಜಾರಿ ಎಂದು ಗುರುತಿಸಲಾಗಿದೆ. ನಾವೂರು ನಿವಾಸಿ ಸುರೇಶ್ ಇಂಚರ ಹಾಗೂ ಪುತ್ತೂರಿನ ಕೌಡಿಬಾರು ನಿವಾಸಿ ದಿನೇಶ್ ಪ್ರಭು ನಾವೂರು ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಅ.6ರಂದು ತಡರಾತ್ರಿ ದುಷ್ಕರ್ಮಿಗಳು ಕ್ಲಿನಿಕ್‌ಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಲು ಪ್ರಯತ್ನಿಸಿದ್ದರು. ಘಟನೆಯಲ್ಲಿ ಕ್ಲಿನಿಕ್‌ನಲ್ಲಿದ್ದ ಔಷಧಿಗಳು ಹಾಗೂ ವೈದ್ಯಕೀಯ ಸಲಕರಣೆಗಳು ಸಂಪೂರ್ಣ ಸುಟ್ಟುಹೋಗಿದ್ದು, ಸುಮಾರು 2ರಿಂದ 3 ಲಕ್ಷ ರೂ. ನಷ್ಟ ಸಂಭವಿಸಿತ್ತು. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 326 ಮತ್ತು 324ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆಯ ಹಿಂದೆ ಇರುವವರನ್ನು ಪತ್ತೆಹಚ್ಚಿ ಸಮಗ್ರ ತನಿಖೆ ನಡೆಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ನಾವೂರು ಗ್ರಾಮದಲ್ಲಿ ಇಂತಹ ಘಟನೆಗಳು ಪದೇಪದೇ ನಡೆಯುತ್ತಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಗ್ರಾಮದಲ್ಲಿ ಶಾಂತಿ ನೆಲೆಸಲು ಡಾ. ಪ್ರದೀಪ್ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದರು.

ಹಲವು ಸಂಘಟನೆಗಳಿಂದ ಆರೋಪಿಗಳ ಬಂಧನಕ್ಕೆ ಒತ್ತಡ

ಡಾ. ಪ್ರದೀಪ್ ಅವರ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಕೃತ್ಯವನ್ನು ಶಾಸಕ ಹರೀಶ್ ಪೂಂಜ ಸೇರಿದಂತೆ ಜನಪ್ರತಿನಿಧಿಗಳು, ವೈದ್ಯರು, ಉದ್ಯಮಿಗಳು ಹಾಗೂ ನಾಗರಿಕರು ಖಂಡಿಸಿದ್ದರು. ನಾವೂರು ಗ್ರಾಮಸ್ಥರೂ ಖಂಡನಾ ಸಭೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.

ಘಟನೆ ನಡೆದು ಏಳು ದಿನಗಳು ಕಳೆದರೂ ಆರೋಪಿಗಳ ಬಂಧನವಾಗದಿರುವುದಕ್ಕೆ ವಿಶ್ವ ಹಿಂದೂ ಪರಿಷತ್–ಬಜರಂಗದಳದ ಬೆಳ್ತಂಗಡಿ ಪ್ರಖಂಡವು ಅ.13ರಂದು ಪತ್ರಿಕಾ ಪ್ರಕಟಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿತ್ತು. ಆರೋಪಿಗಳನ್ನು ಶೀಘ್ರ ಬಂಧಿಸದಿದ್ದರೆ ದುರ್ಗಾ ವಾಹಿನಿ ಮತ್ತು ಮಾತೃ ಮಂಡಳಿಯ ಸಹಯೋಗದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಿ, ಇನ್ನಿಬ್ಬರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಬೂಮರೆಡ್ಡಿ ಹಾಗೂ ಡಿವೈಎಸ್‌ಪಿ ರೋಹಿಣಿ ಸಿ.ಕೆ. ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ಪಿಎಸ್‌ಐಗಳಾದ ಆನಂದ್ ಮತ್ತು ಸಿಕಂದರ್ ಪಾಷಾ ಅವರ ತಂಡ ಕಾರ್ಯಾಚರಣೆ ನಡೆಸಿದೆ. ಪ್ರಕರಣದ ಹಿಂದಿನ ಉದ್ದೇಶ ಹಾಗೂ ಇತರರ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.