ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ ಸಾಂಪ್ರದಾಯಿಕ ಚಂಗ್ರಾಂದಿ ಪತ್ತಲೋದಿ ನಮ್ಮೆ

0
40

ಪೊನ್ನಂಪೇಟೆ : ಪತ್ರಿಕೋದ್ಯಮ ಕ್ಷೇತ್ರದಲ್ಲಿ 46 ವರ್ಷಗಳಿಂದ ಸೇವೆ ಮಾಡುತ್ತಿದ್ದು, ಹಲವು ಸಂಘ,ಸಂಸ್ಥೆ, ಕೊಡವ ಸಮಾಜಗಳ ಸಾಮಾಜಿಕ ಸೇವೆ, ಕೊಡವ ಸಂಸ್ಕೃತಿಯ ಪರ ಮಾಡುತ್ತಿರುವ ಸೇವೆ, ಸಾಧನೆಗಳನ್ನು ಗಮನಿಸಿದ್ದೇನೆ. ಆದರೆ ಕೊಡವರ ಕುಲದೇವಿ ಕಾವೇರಿ ತಾಯಿಯ ಹೆಸರಿನಲ್ಲಿ ಹತ್ತು ದಿನಗಳವರೆಗೆ ಮಕ್ಕಳು, ಯುವಕ ಯುವತಿಯರು, ಹಿರಿಯರು ಸೇರಿದಂತೆ ಎಲ್ಲರನ್ನೊಳಗೊಂಡ ಜನೋತ್ಸವದ ರೀತಿಯಲ್ಲಿ ಇಂತಹ ಕಾರ್ಯಕ್ರಮ ನಡೆಸುತ್ತಿರುವುದು ಇಡೀ ಪ್ರಪಂಚದಲ್ಲಿ ಈ ಟಿ.ಶೆಟ್ಟಿಗೇರಿಯ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ಮಾತ್ರ ಎಂಬುದು ಹೆಮ್ಮೆಯ ವಿಚಾರವಾಗಿದೆ ಎಂದು ಬ್ರಹ್ಮಗಿರಿ ಕೊಡವ ವಾರ ಪತ್ರಿಕೆಯ ಸಂಪಾದಕ, ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ|| ಉಳ್ಳಿಯಡ ಎಂ.ಪೂವಯ್ಯ ಮೆಚ್ಚುಗೆಯ ನುಡಿಯನ್ನಾಡಿದರು.

ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೆರೆ ಮೂಂದ ನಾಡ್ ಕೊಡವ ಸಮಾಜದ ಚಂಗ್ರಾಂದಿ ಪತ್ತಲೋದಿ ಪೈತಾಂಡ್ ನಮ್ಮೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಎಲೆ ಮರೆಯ ಕಾಯಂತಿರುವ ಹಲವು ಪ್ರತಿಭೆಗಳಿಗೆ ವೇದಿಕೆ ನೀಡುವ ಕಾರ್ಯಕ್ರಮ ಇದಾಗಿದ್ದು ಎಲ್ಲರೂ ಈ ಅವಕಾಶವನ್ನು ಬಳಸಿಕೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಬೇಕು. ತನ್ಮೂಲಕ ಕಾವೇರಿ ತಾಯಿಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಾಯಿಯ ಕೃಪೆಗೆ ಪಾತ್ರರಾಗುವುದರೊಂದಿಗೆ ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು. ಹತ್ತು ದಿನಗಳವರೆಗೆ ವಿವಿಧ ತಂಡಗಳಿಂದ ಸಾಂಸ್ಕೃತಿಕ ಪ್ರದರ್ಶನ ಮಾಡಿಸುತ್ತಿರುವುದು ಸಾಮಾನ್ಯ ಕೆಲಸವಲ್ಲ. ಈ ಕಾರ್ಯಕ್ಕೆ ನಾಡಿನ ಎಲ್ಲರೂ ಕೈಜೋಡಿಸಬೇಕು.

ಹತ್ತನೇ ವರ್ಷದ ಈ ಕಾರ್ಯಕ್ರಮ ಯಶಸ್ಸು‌ ಕಾಣುವುದರೊಂದಿಗೆ ಪ್ರತೀ ವರ್ಷ ಅತ್ಯುತ್ತಮವಾಗಿ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮ ನಡೆಯಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾವಳಗೇರಿ ಮೂಂಡ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಪ್ರಸ್ತಾವಿಕ ಮಾತನಾಡಿ ನಮ್ಮ ಕೊಡವ ಸಮಾಜ ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮ ಮಾಡುವುದರೊಂದಿಗೆ ಕೊಡವರ ಜನಸಂಖ್ಯೆ ವೃದ್ಧಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ತಾವಳಗೇರಿ ಮೂಂಡ್ ನಾಡ್ ವ್ಯಾಪ್ತಿಗೊಳಪಟ್ಟಂತೆ ಮೂರು ಮಕ್ಕಳನ್ನು ಪಡೆಯುವ ಪೋಷಕರ ಮೂರನೇ ಮಗುವಿನ ಹೆಸರಿನಲ್ಲಿ ರೂ.50 ಸಾವಿರ ಹಾಗೂ ನಾಲ್ಕನೇ ಮಗುವಿನ ಹೆಸರಿನಲ್ಲಿ ಒಂದು ಲಕ್ಷ ರೂ.ಗಳನ್ನು ಪ್ರೋತ್ಸಾಹ ಧನವಾಗಿ ಮಗುವಿನ ಹೆಸರಿನಲ್ಲಿ ಠೇವಣಿ ಇಡುವುದಾಗಿ ಘೋಷಿಸಿದ್ದು ಪ್ರಸಕ್ತ ವರ್ಷ ಇಬ್ಬರು ಪೋಷಕರ ಅರ್ಜಿ ಬಂದಿದ್ದು ಅವರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭ ಪೊನ್ನಂಪೇಟೆ ಕೊಡವ ಸಮಾಜದ ವತಿಯಿಂದ ನೀಡಿದ ‘ಆರೋಡ ಮಣ್ಣ್’ಲ್ ಕಾರೋಣದ ಬಲ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದ ಆರಂಭದಲ್ಲಿ ಸಂಭ್ರಮ ಪೊಮ್ಮಕ್ಕಡ ಕೂಟದ ಸದಸ್ಯೆ ಅಜ್ಜಮಾಡ ಸಾವಿತ್ರಿ ಪ್ರಾರ್ಥಿಸಿ, ಕೊಡವ ಸಮಾಜದ ನಿರ್ದೇಶಕಿ ಚಂಗುಲಂಡ ಅಶ್ವಿನಿ ಸತೀಶ್ ಸ್ವಾಗತಿಸಿ, ಸಾಂಸ್ಕೃತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ನಿರೂಪಿಸಿ, ನಿರ್ದೇಶಕಿ ತೀತೀರ ಅನಿತ ಸುಬ್ಬಯ್ಯ ವಂದಿಸಿದರು.

ಕಾರ್ಯಕ್ರಮದಲ್ಲಿ ತಾವಳಗೇರಿ ಮೂಂಡ್ ನಾಡ್ ಕೊಡವ ಸಮಾಜದ ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ, ಸಹ ಕಾರ್ಯದರ್ಶಿ ಬಾದುಮಂಡ ವಿಷ್ಣು ಕಾರ್ಯಪ್ಪ, ಖಜಾಂಚಿ ಚಂಗುಲಂಡ ಸತೀಶ್, ನಿರ್ದೇಶಕರಾದ ತಡಿಯಂಗಡ ಸೌಮ್ಯ ಕರಂಬಯ್ಯ, ಮಾಣೀರ ದೀಪಕ್, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೋಟ್ರಮಾಡ ರೇಷ್ಮ ಕಾರ್ಯಪ್ಪ, ಕಾರ್ಯದರ್ಶಿ ಕಳ್ಳಿರಚಂಡ ದೀನ ಉತ್ತಪ್ಪ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

ವರದಿ: ಪ್ರಿತುನ್ ಪೂವಣ್ಣ