

ಉಡುಪಿ: ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಶ್ರೀ ಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ 24ನೇ ವರ್ಷದ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಾಯಾತ್ರೆಯು ಅಕ್ಟೋಬರ್ 22ರಂದು ಅತ್ಯಂತ ಅದ್ದೂರಿಯಾಗಿ ನಡೆಯಿತು. ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ನಡೆದ ಮೆರವಣಿಗೆಯು ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಯಿತು.
ಶ್ರೀ ಲಕ್ಷ್ಮೀ ವೆಂಕಟೇಶ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಶ್ರೀ ಶಾರದಾ ದೇವಿಗೆ ಮಲ್ಲಿಗೆ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಅರ್ಚಕ ದಯಾಘನ್ ಭಟ್ ಅವರು ಆರತಿ ಬೆಳಗಿಸಿ ಶ್ರೀ ಮಾತೆಯ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿನಾಯಕ ಭಟ್, ದೀಪಕ್ ಭಟ್ ಹಾಗೂ ಗಿರೀಶ್ ಭಟ್ ಸಹಕರಿಸಿದರು.
ರಜತ ಅಲಂಕಾರದಿಂದ ಕಂಗೊಳಿಸುತ್ತಿದ್ದ ಶ್ರೀ ಶಾರದಾ ದೇವಿಯ ಮೂರ್ತಿಯನ್ನು ಸ್ವಯಂಸೇವಕರು ಭುಜದ ಮೇಲೆ ಹೊತ್ತುಕೊಂಡು ಸಾಗಿದರು. ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಯು ಐಡಿಯಲ್ ಸರ್ಕಲ್, ಹಳೆ ಡಯಾನ ಸರ್ಕಲ್, ತ್ರಿವೇಣಿ ಸರ್ಕಲ್, ಚಿತ್ತರಂಜನ್ ವೃತ್ತ ಹಾಗೂ ತೆಂಕಪೇಟೆ ರಸ್ತೆಯ ಮೂಲಕ ಸಾಗಿ ಕೊಳದಪೇಟೆ ಮಾರ್ಗವಾಗಿ ಪುನಃ ದೇವಸ್ಥಾನಕ್ಕೆ ತಲುಪಿತು. ಬಳಿಕ ದೇವಸ್ಥಾನದ ಪದ್ಮ ಸರೋವರದಲ್ಲಿ ತೆಪ್ಪೋತ್ಸವ ನೆರವೇರಿಸಿ, ವಂದೇ ಮಾತರಂ ದೇಶಭಕ್ತಿ ಗೀತೆಯ ಗಾಯನದೊಂದಿಗೆ ಶ್ರೀ ಶಾರದಾ ಮಾತೆಯ ವಿಸರ್ಜನಾ ವಿಧಿಯನ್ನು ನೆರವೇರಿಸಲಾಯಿತು.
ಶೋಭಾಯಾತ್ರೆಯಲ್ಲಿ ವಿವಿಧ ಆಕರ್ಷಕ ಟ್ಯಾಬ್ಲೋಗಳು, ಚಂಡೆ ವಾದನ, ನಾಸಿಕ್ ಬ್ಯಾಂಡ್, ಯಕ್ಷಗಾನ, ಹುಲಿವೇಷ ಹಾಗೂ ಮಂಗಳವಾದ್ಯಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು. ವಿಶೇಷವಾಗಿ ವೆಂಕಟರಮಣ ದೇವರ ವೇಷ, ಕುಣಿತ ಭಜನೆ, ವಿಠೋಬಾ–ರುಕ್ಮಾಯಿ, ಶ್ರೀ ಪುರಂದರದಾಸ ಹಾಗೂ ಶ್ರೀ ಕನಕದಾಸರ ವೇಷಧಾರಿಗಳು ಭಕ್ತರ ಗಮನ ಸೆಳೆದರು.
ಸಮವಸ್ತ್ರ ಧರಿಸಿದ ನೂರಾರು ಸ್ವಯಂಸೇವಕರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಸಾವಿರಾರು ಪುರುಷರು, ಮಹಿಳೆಯರು, ಯುವಕರು ಹಾಗೂ ಯುವತಿಯರು ಭಜನೆ ಮತ್ತು ಸಂಕೀರ್ತನೆಗಳನ್ನು ಹಾಡುತ್ತಾ ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು. ಊರು ಹಾಗೂ ಪರವೂರಿನಿಂದ ಆಗಮಿಸಿದ ಸಾವಿರಾರು ಭಕ್ತರು ಉತ್ಸವದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಗುಜ್ಜಾಡಿ ಪ್ರಭಾಕರ್ ನಾಯಕ್, ಆಡಳಿತ ಮಂಡಳಿಯ ಸದಸ್ಯರಾದ ನಾರಾಯಣ ಪ್ರಭು, ಡಾ. ಕೈಲಾಸನಾಥ ಶೆಣೈ, ಉಮೇಶ್ ಪೈ, ಅಶೋಕ್ ಬಾಳಿಗ, ದಿನೇಶ್ ಪೈ, ಡಾ. ವಿನಾಯಕ ಶೆಣೈ, ಸುಭಾಷ್ ಮಧುಕರ್ ಕಾಮತ್, ವೆಂಕಟೇಶ್ ಭಟ್, ಪ್ರಭಾಕರ್ ಭಟ್, ಮಹೇಶ್ ಶೆಣೈ, ಮಟ್ಟಾರ್ ವಸಂತ್ ಕಿಣೆ, ಚಿತ್ತರಂಜನ್ ಭಟ್ ಹಾಗೂ ಹರಿರಾಮ್ ಶೆಣೈ ಉಪಸ್ಥಿತರಿದ್ದರು.
ಶ್ರೀ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಪಿ. ಅಜಿತ್ ಕುಡ್ವ, ಕಾರ್ಯದರ್ಶಿ ಶ್ಯಾಮ ಪ್ರಸಾದ್ ಕುಡ್ವ, ಖಜಾಂಚಿ ನಾರಾಯಣ ಭಟ್, ಶಾಸಕ ಯಶ್ಪಾಲ್ ಸುವರ್ಣ, ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಕಾಂಗ್ರೆಸ್ ಮುಖಂಡ ವಿನಯ ಕುಮಾರ್ ಸೊರಕೆ, ಅಮೃತ್ ಶೆಣೈ, ಭಜನಾ ಮಹೋತ್ಸವದ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ, ಭಾಸ್ಕರ್ ಶೆಣೈ, ಪಿ.ವಿ. ಶೆಣೈ, ಅಲೆವೂರು ಗಣೇಶ್ ಕಿಣಿ ಹಾಗೂ ಶಾಂತರಾಮ ಪೈ ಸೇರಿದಂತೆ ಜಿ.ಎಸ್.ಬಿ. ಯುವಕ ಮಂಡಳಿ, ಭಗಿನಿ ವೃಂದ, ಜಿ.ಎಸ್.ಬಿ. ಮಹಿಳಾ ಮಂಡಳಿ, ಭಜನಾ ಮಹೋತ್ಸವ ಸಮಿತಿ ಮತ್ತು ವಿವಿಧ ಸಮಿತಿಗಳ ಸದಸ್ಯರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
