ಪಿಂಕ್ ಅಕ್ಟೋಬರ್: ಸ್ತನ ಕ್ಯಾನ್ಸರ್ ಜಾಗೃತಿ

0
14

ಮಂಗಳೂರು : ಅಂತರರಾಷ್ಟ್ರೀಯ ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ, ಮ್ಯಾನ್‍ಕೈಂಡ್ ಫಾರ್ಮಾ ತನ್ನ ಪಿಂಕ್ ಅಕ್ಟೋಬರ್ ಅಭಿಯಾನ ಆಯೋಜಿಸಿದ್ದು, ಈ ಮೂಲಕ ಸ್ತನ ಕ್ಯಾನ್ಸರ್ ಜಾಗೃತಿ, ಆರಂಭಿಕ ಹಂತದಲ್ಲೇ ರೋಗ ಪತ್ತೆ ಮತ್ತು ಸಕಾಲಿಕ ಚಿಕಿತ್ಸೆಯ ಮಹತ್ವವನ್ನು ಸಾರ್ವಜನಿಕವಾಗಿ ಸಾರುವ ಯೋಜನೆ ಆರಂಭಿಸಿದೆ.

ಕ್ಯಾನ್ಸರ್ ಬಗೆಗಿನ ಜಾಗೃತಿಯನ್ನು ಜನಸಾಮಾನ್ಯರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಹಾಗೂ ಪ್ರತಿಯೊಬ್ಬ ನಾಗರಿಕರು ತಮ್ಮ ಆರೋಗ್ಯದ ಬಗ್ಗೆ ಪೂರ್ವಭಾವಿ, ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲು ಪ್ರೇರೇಪಿಸುವ ಉದ್ದೇಶ ಹೊಂದಿರುವ ಸಂಸ್ಥೆಯ ಮಹತ್ವಾಕಾಂಕ್ಷೆಯ #1 ಮಿಲಿಯನ್ ಲೈವ್ಸ್ ಪರಿಕಲ್ಪನೆಯ ಅಡಿಪಾಯದ ಮೇಲೆ ಈ ಜನಪರ ಯೋಜನೆ ಮೂಡಿಬಂದಿದೆ ಎಂದು ಮ್ಯಾನ್‍ಕೈಂಡ್ ಫಾರ್ಮಾದ ಹಿರಿಯ ಅಧ್ಯಕ್ಷ ಅತೀಶ್ ಮಜುಂದಾರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

“ಸ್ತನದಲ್ಲಿ ಕಾಣಿಸಿಕೊಳ್ಳುವ ಅಸಹಜ ಬದಲಾವಣೆಗಳನ್ನು ಬೇಗನೆ ಗುರುತಿಸುವುದು ಮತ್ತು ಯಾವುದೇ ವಿಳಂಬವಿಲ್ಲದೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಸಕಾಲಿಕ ರೋಗನಿರ್ಣಯದ ಪ್ರಮುಖ ಹೆಜ್ಜೆಯಾಗಿದೆ. ಸ್ಕ್ರೀನಿಂಗ್ ತಪಾಸಣೆಯ ಮಾರ್ಗಸೂಚಿಗಳು ವ್ಯಕ್ತಿಯ ವಯಸ್ಸು ಮತ್ತು ವೈಯಕ್ತಿಕ ಅಪಾಯದ ಅಂಶಗಳನ್ನು ಅವಲಂಬಿಸಿರುವುದರಿಂದ, ಅರ್ಹ ವೈದ್ಯರ ಸಮಾಲೋಚನೆ ಅತ್ಯಗತ್ಯ ಎಂದು ಮಂಗಳೂರಿನ ಕೆ. ಎಸ್. ಹೆಗ್ಡೆ ಆಸ್ಪತ್ರೆಯ ಹಿರಿಯ ಕನ್ಸಲ್ಟೆಂಟ್ ಮೆಡಿಕಲ್ ಆಂಕೊಲಾಜಿಸ್ಟ್ ಡಾ. ವಿಜಿತ್ ಶೆಟ್ಟಿ ವಿವರಿಸಿದ್ದಾರೆ.

ಕಳೆದ ಜೂನ್ 2026ರಲ್ಲಿ ಆರಂಭಗೊಂಡ ಮ್ಯಾನ್‍ಕೈಂಡ್ ಫಾರ್ಮಾದ #1 ಮಿಲಿಯನ್ ಲೈವ್ಸ್ ಯೋಜನೆಯ ಭಾಗವಾಗಿ ಈಗಾಗಲೇ 500ಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ. ಹಾಗೆಯೇ ಜುಲೈ ತಿಂಗಳಲ್ಲಿ 285 ವೈದ್ಯರು 10 ಲಕ್ಷ ಕುಟುಂಬಗಳನ್ನು ರಕ್ಷಿಸಲು ನೆರವಾಗುವುದಾಗಿ ಶಪಥ ಮಾಡಿದ್ದರು. ಪಿಂಕ್ ಅಕ್ಟೋಬರ್ ಮೂಲಕ ಸಂಸ್ಥೆಯು ಕ್ಯಾನ್ಸರ್ ತಡೆಗಟ್ಟುವಿಕೆ ಕಡೆಗೆ ತನ್ನ ಗಮನವನ್ನು ಮತ್ತಷ್ಟು ಬಲಪಡಿಸಿದ್ದು, ಆರಂಭಿಕ ಪತ್ತೆ ಹಾಗೂ ಸಕಾಲಿಕ ಆರೈಕೆಯ ಬಗ್ಗೆ ವ್ಯಾಪಕ ಅರಿವು ಮೂಡಿಸುವುದನ್ನು ಮುಂದುವರಿಸಿದೆ ಎಂದು ಪ್ರಕಟಣೆ ವಿವರಿಸಿದೆ.