ಜ್ಯೋತಿ ಇಲ್ಲದ ಗೃಹಕ್ಕೆ ಗೃಹಜ್ಯೋತಿ ಭಾಗ್ಯವೇ? – ಕೆ. ವಿಜಯ ಕೊಡವೂರು

0
7

ನಿರಂತರ ವಿದ್ಯುತ್ ಕಡಿತಕ್ಕೆ ನಾಗರಿಕರ ಆಕ್ರೋಶ ; ಸಮಸ್ಯೆ ಮುಂದುವರಿದರೆ ಪ್ರತಿಭಟನೆ ಎಚ್ಚರಿಕೆ

ಉಡುಪಿ : ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದ್ದರೂ, ನಿರಂತರ ವಿದ್ಯುತ್ ಕಡಿತದಿಂದ ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ. ಯಾವುದೇ ಮುನ್ಸೂಚನೆ ಇಲ್ಲದೆ ದಿನನಿತ್ಯ ವಿದ್ಯುತ್ ಸ್ಥಗಿತಗೊಳಿಸುತ್ತಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ದುಸ್ತರವಾಗಿದೆ ಎಂದು ದಿವ್ಯಾಂಗ ರಕ್ಷಣಾ ಸಮಿತಿಯ ಸಂಚಾಲಕರಾದ ಕೆ. ವಿಜಯ ಕೊಡವೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆಯಿಲ್ಲದೆ ಬೇಸಿಗೆಯ ವಾತಾವರಣ ಮುಂದುವರಿಯುತ್ತಿರುವುದರಿಂದ ಬಿಸಿಲಿನ ತಾಪ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಕಡಿತದಿಂದ ಹಿರಿಯ ನಾಗರಿಕರಿಗೆ ರಾತ್ರಿ ನೆಮ್ಮದಿಯಿಂದ ಮಲಗಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಓದಲು ತೊಂದರೆಯಾಗುತ್ತಿದ್ದು, ಮಕ್ಕಳು ಹಾಗೂ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.

ವಿದ್ಯುತ್ ಕಡಿತ ಅನಿವಾರ್ಯವಾಗಿದ್ದರೂ, ಅದರ ಬಗ್ಗೆ ಮುಂಚಿತವಾಗಿ ಪತ್ರಿಕೆಗಳ ಮೂಲಕ ಅಥವಾ ಇತರ ಸಾರ್ವಜನಿಕ ಮಾಹಿತಿ ಮಾಧ್ಯಮಗಳ ಮೂಲಕ ಯಾವುದೇ ಪ್ರಕಟಣೆ ನೀಡದೆ ವಿದ್ಯುತ್ ಸ್ಥಗಿತಗೊಳಿಸುತ್ತಿರುವುದು ಸರಿಯಲ್ಲ. ಇದರಿಂದ ಸಾರ್ವಜನಿಕರ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದ್ದು, ನಾಗರಿಕರಲ್ಲಿ ತೀವ್ರ ಅಸಮಾಧಾನ ಮೂಡಿದೆ.

ಸರ್ಕಾರ ಒಂದು ಕಡೆ ಉಚಿತ ವಿದ್ಯುತ್ ಯೋಜನೆಯನ್ನು ಜಾರಿಗೊಳಿಸಿ ಜನರಿಗೆ ಅನುಕೂಲ ಕಲ್ಪಿಸುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ನಿರಂತರ ವಿದ್ಯುತ್ ಕಡಿತದಿಂದ ಜನರು ಮೂಲಭೂತ ಸೌಲಭ್ಯದಿಂದಲೇ ವಂಚಿತರಾಗುತ್ತಿರುವುದು ವಿಪರ್ಯಾಸವಾಗಿದೆ.

ಆದ್ದರಿಂದ ಸಂಬಂಧಪಟ್ಟ ವಿದ್ಯುತ್ ಇಲಾಖೆಯ ಅಧಿಕಾರಿಗಳು ತಕ್ಷಣವೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಅನಿವಾರ್ಯ ಕಾರಣಗಳಿಂದ ವಿದ್ಯುತ್ ಸ್ಥಗಿತಗೊಳಿಸುವುದಾದರೆ ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದು ಕೆ. ವಿಜಯ ಕೊಡವೂರು ಆಗ್ರಹಿಸಿದ್ದಾರೆ.

ಮುಂದಿನ ದಿನಗಳಲ್ಲಿಯೂ ವಿದ್ಯುತ್ ಕಡಿತದ ಸಮಸ್ಯೆ ಮುಂದುವರಿದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ದಿವ್ಯಾಂಗ ರಕ್ಷಣಾ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.