ಮಂಗಳೂರು : ಆದಿತ್ಯ ಬಿರ್ಲಾ ಸಮೂಹದ ಪ್ರಮುಖ ಆಭರಣ ಬ್ರ್ಯಾಂಡ್ ‘ಇಂದ್ರಿಯಾ’, ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ಪಾರಂಪರಿಕ ಹಬ್ಬದ ಆಚರಣೆಗಳಿಗೆ ಅರ್ಥಪೂರ್ಣ ಗೌರವ ಸಲ್ಲಿಸುವ ಸಲುವಾಗಿ ಸುಸ್ಥಿರ ‘ಆಭರಣ ರಂಗವಲ್ಲಿ’ಯನ್ನು ನಗರದ ಒರಾಯನ್ ಮಾಲ್ ಹಾಗೂ ತ್ಯಾಗರಾಜನಗರದ ಶ್ರೀ ಸತ್ಯ ಗಣಪತಿ ಶಿರಡಿ ಸಾಯಿಬಾಬಾ ದೇವಸ್ಥಾನದ ಆವರಣದಲ್ಲಿ ಅನಾವರಣಗೊಳಿಸಿದೆ.
ವಿಜಯದಶಮಿ ಹಬ್ಬದ ಅಂಗವಾಗಿ 1,600 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಈ ಬೃಹತ್ ಕಲಾಕೃತಿಯು, ಸಂಸ್ಥೆಯ ಹಬ್ಬದ ವಿಶೇಷ ಆಭರಣ ಸಂಗ್ರಹ ‘ಪದ್ಮಿಕಾ’ದ ವಿಶಿಷ್ಟ ವಿನ್ಯಾಸದಿಂದ ಪ್ರೇರಿತವಾಗಿದೆ. 22 ಕ್ಯಾರೆಟ್ ಅಪರಂಜಿ ಚಿನ್ನದ ಈ ಆಭರಣ ಸರಣಿಯು, ಪ್ರಾಚೀನ ‘ಗುಲಾಬಿ ಮೀನಾಕಾರಿ’ ಎನಾಮೆಲ್ ಕಲೆಯ ಮರುಜೀವ ಹಾಗೂ ಕಮಲದ ಮೇಲೆ ಆಸೀನಳಾಗಿರುವ ಲಕ್ಷ್ಮೀ ದೇವಿಯ ಮಂಗಳಕರ ಆಕೃತಿಯನ್ನು ಒಳಗೊಂಡಿದೆ.
ಖ್ಯಾತ ರಂಗೋಲಿ ಕಲಾವಿದೆ, ‘3ಡಿ ರಂಗೋಲಿ ಕ್ವೀನ್’ ಶಿಖಾ ಶರ್ಮಾ ಅವರ ನೈಪುಣ್ಯತೆಯಲ್ಲಿ ಈ ರಂಗವಲ್ಲಿ ಅರಳಿದೆ. ಟೆಂಪಲ್ ಜ್ಯುವೆಲ್ಲರಿಯ ನವಿರಾದ ನಕ್ಷಿ ಕೆತ್ತನೆಗಳನ್ನು ಅಕ್ಕಿ, ರಾಗಿ, ನವಣೆ ಸೇರಿದಂತೆ ವಿವಿಧ ಸಿರಿಧಾನ್ಯಗಳು ಹಾಗೂ ನೈಸರ್ಗಿಕ ಕಾಳುಗಳನ್ನು ಬಳಸಿ ಕಲಾತ್ಮಕವಾಗಿ ಮರುಸೃಷ್ಟಿಸಲಾಗಿದೆ. ಇದು ಆಭರಣ ತಯಾರಿಕೆ ಹಾಗೂ ರಂಗವಲ್ಲಿ ರಚನೆಯ ಶ್ರೇಷ್ಠ ಕರಕುಶಲತೆಯನ್ನು ಒಂದೇ ವೇದಿಕೆಯಲ್ಲಿ ಸಾರಿದೆ.
ಪರಿಸರ ಸುಸ್ಥಿರತೆಯ ಕಾಳಜಿಯೊಂದಿಗೆ, ಹಬ್ಬದ ನಂತರ ಈ ರಂಗವಲ್ಲಿಗೆ ಬಳಸಲಾದ ಧಾನ್ಯಗಳನ್ನು ‘ಅಖಿಲ ಕರ್ನಾಟಕ ಪ್ರಾಣಿ ದಯಾ ಸಂಘ’ದ ಗೋಶಾಲೆಯ ಸಹಯೋಗದೊಂದಿಗೆ ಪಕ್ಷಿಗಳು ಹಾಗೂ ಮೂಕ ಪ್ರಾಣಿಗಳಿಗೆ ಆಹಾರವಾಗಿ ವಿತರಿಸಲಾಗುವುದು.
ಈ ಯೋಜನೆಯ ಕುರಿತು ಮಾತನಾಡಿದ ಇಂದ್ರಿಯಾ ಸಂಸ್ಥೆಯ ಮಾರ್ಕೆಟಿಂಗ್ ಮತ್ತು ವಿಶುವಲ್ ಮರ್ಚಂಡೈಸಿಂಗ್ ಮುಖ್ಯಸ್ಥ ಶಾಂತಿಸ್ವರೂಪ್ ಪಾಂಡಾ, “ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಶ್ರೇಷ್ಠ ಕರಕುಶಲತೆಯನ್ನು ಸಮಕಾಲೀನ ಅಭಿವ್ಯಕ್ತಿಗಳ ಮೂಲಕ ಆಚರಿಸುವುದು ನಮ್ಮ ಉದ್ದೇಶ. ಪದ್ಮಿಕಾ ವಿನ್ಯಾಸವನ್ನು ಜನಪ್ರಿಯ ರಂಗವಲ್ಲಿ ಸಂಪ್ರದಾಯದ ಮೂಲಕ ಸಾರ್ವಜನಿಕರ ಮುಂದೆ ತಂದಿರುವುದು ಗ್ರಾಹಕರೊಂದಿಗೆ ಭಾವನಾತ್ಮಕ ಬೆಸುಗೆಗೆ ಹಾದಿಮಾಡಿಕೊಟ್ಟಿದೆ,” ಎಂದು ತಿಳಿಸಿದರು.
ಸಾರ್ವಜನಿಕರಿಗೆ ರಂಗವಲ್ಲಿ ಸ್ಪರ್ಧೆ ಮತ್ತು ಚಿನ್ನದ ನಾಣ್ಯ ಗೆಲ್ಲುವ ಅವಕಾಶ
ಹಬ್ಬದ ಸಂಭ್ರಮವನ್ನು ವಿಸ್ತರಿಸಲು ಸಂಸ್ಥೆಯು ಸಾರ್ವಜನಿಕರಿಗಾಗಿ ರಂಗವಲ್ಲಿ ಸ್ಪರ್ಧೆಯನ್ನು ಆಯೋಜಿಸಿದೆ. ಸಂಸ್ಥೆ ಒದಗಿಸಿದ ಸ್ಟೆನ್ಸಿಲ್ ಬಳಸಿ ಪದ್ಮಿಕಾ ಆಭರಣ ವಿನ್ಯಾಸದ ರಂಗವಲ್ಲಿ ಬಿಡಿಸಿ, ಅದರ ಛಾಯಾಚಿತ್ರವನ್ನು ಸಾಮಾಜಿಕ ಮಾಧ್ಯಮ ಅಥವಾ ವಾಟ್ಸಾಪ್ ಮೂಲಕ ಹಂಚಿಕೊಳ್ಳಬಹುದು.
ಆಯ್ಕೆಯಾಗುವ 100 ಅದೃಷ್ಟಶಾಲಿ ವಿಜೇತರಿಗೆ ತಲಾ 200 ಮಿಲಿಗ್ರಾಂ ತೂಕದ 22 ಕ್ಯಾರೆಟ್ ಚಿನ್ನದ ನಾಣ್ಯವನ್ನು ಬಹುಮಾನವಾಗಿ ನೀಡಲಾಗುವುದು.

