ಸಾಮಾಜಿಕ ಕಾರ್ಯಕರ್ತಸತೀಶ್ ಪೂಜಾರಿ ಕೀಳಂಜೆ ಅವರ ಒಂದು ವರ್ಷದ ಹೋರಾಟಕ್ಕೆ ಫಲ : 20 ವರ್ಷಗಳ ಹಳೆಯ ವಿದ್ಯುತ್ ಟಿಸಿ ಬದಲಾವಣೆಗೆ ಕ್ರಮ

0
47

ಹಾವಂಜೆ ಕೀಳಂಜೆ ವಾರ್ಡ್‌ನ 35ರಿಂದ 40 ಮನೆಗಳು ಹಾಗೂ ರೈತರಿಗೆ ಅನುಕೂಲ

ಬ್ರಹ್ಮಾವರ : ಹಾವಂಜೆ ಗ್ರಾಮದ ಕೀಳಂಜೆ ನಾಲ್ಕನೇ ವಾರ್ಡ್‌ನ ಶ್ರೀ ಹರಿಹರ ದೇವಸ್ಥಾನದ ಸಮೀಪ, ಪೌಲ್ ಡಿ ಅಲ್ಮೇಡಾ ಅವರ ಮನೆಗೆ ತೆರಳುವ ರಸ್ತೆಯಲ್ಲಿದ್ದ ಸುಮಾರು 20 ವರ್ಷಗಳ ಹಳೆಯ ಮೆಸ್ಕಾಂ ವಿದ್ಯುತ್ ಪರಿವರ್ತಕವನ್ನು (ಟಿಸಿ) ಬದಲಾಯಿಸುವ ಕಾರ್ಯಕ್ಕೆ ಅಕ್ಟೋಬರ್ 28ರಂದು ಚಾಲನೆ ದೊರೆತಿದೆ. ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರ ನಿರಂತರ ಒಂದು ವರ್ಷದ ಪ್ರಯತ್ನದ ಫಲವಾಗಿ ಹೊಸ ಟಿಸಿಗೆ ಸಂಬಂಧಿಸಿದ ಕಂಬ ಹಾಗೂ ಅಗತ್ಯ ಪರಿಕರಗಳನ್ನು ಅಳವಡಿಸಲಾಗಿದೆ.

ಈ ಪ್ರದೇಶದಲ್ಲಿ ಹಳೆಯ ಟಿಸಿಯಿಂದ ಸುಮಾರು 35ರಿಂದ 40 ಮನೆಗಳ ನಿವಾಸಿಗಳು ಹಾಗೂ ರೈತರು ವಿದ್ಯುತ್ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹಳೆಯ ಟಿಸಿಯಿಂದ ಉಂಟಾಗುತ್ತಿದ್ದ ತೊಂದರೆಗಳಿಂದ ಕೃಷಿ ಚಟುವಟಿಕೆಗಳಿಗೂ ಮತ್ತು ಸ್ಥಳೀಯ ನಿವಾಸಿಗಳ ದೈನಂದಿನ ಬದುಕಿಗೂ ಸಮಸ್ಯೆಯಾಗುತ್ತಿತ್ತು.

ಸ್ಥಳೀಯ ರೈತ ಮುಖಂಡ ಪೌಲ್ ಡಿ ಅಲ್ಮೇಡಾ ಅವರು ಈ ಸಮಸ್ಯೆಯನ್ನು ಗಮನಿಸಿ, ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರನ್ನು ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸತೀಶ್ ಪೂಜಾರಿ ಅವರು ಉಡುಪಿ ಮತ್ತು ಬ್ರಹ್ಮಾವರ ಮೆಸ್ಕಾಂ ಅಧಿಕಾರಿಗಳನ್ನು ನಿರಂತರವಾಗಿ ಸಂಪರ್ಕಿಸಿ, ಸ್ಥಳೀಯ ಲೈನ್‌ಮ್ಯಾನ್ ಹಾಗೂ ಇಲಾಖೆಯ ಸಿಬ್ಬಂದಿಯ ಸಹಕಾರದೊಂದಿಗೆ ಟಿಸಿ ಬದಲಾವಣೆಗೆ ಪ್ರಯತ್ನಿಸಿದರು.

ಸುಮಾರು ಒಂದು ವರ್ಷದ ನಿರಂತರ ಪ್ರಯತ್ನದ ಬಳಿಕ ಅಕ್ಟೋಬರ್ 28ರಂದು ಹೊಸ ಟಿಸಿಗೆ ಸಂಬಂಧಿಸಿದ ಕಂಬ ಹಾಗೂ ಅಗತ್ಯ ಪರಿಕರಗಳನ್ನು ಅಳವಡಿಸುವ ಕಾರ್ಯ ನಡೆದಿದೆ. ಇದರಿಂದ ಈ ಭಾಗದ ನಿವಾಸಿಗಳು ಮತ್ತು ರೈತರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.

ಸತೀಶ್ ಪೂಜಾರಿ ಕೀಳಂಜೆ ಅವರು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದೆ, ಕಳೆದ ಸುಮಾರು 20 ವರ್ಷಗಳಿಂದ ಹಾವಂಜೆ ಗ್ರಾಮದ ಕೀಳಂಜೆ ನಾಲ್ಕನೇ ವಾರ್ಡ್‌ನಲ್ಲಿ ವಿವಿಧ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಅವರ ಸೇವೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ರೈತ ಮುಖಂಡ ಪೌಲ್ ಡಿ ಅಲ್ಮೇಡಾ, “ನಮ್ಮ ಪ್ರದೇಶದ ಹಳೆಯ ಟಿಸಿಯಿಂದ ನಿವಾಸಿಗಳಿಗೆ ಹಾಗೂ ರೈತರಿಗೆ ಬಹಳಷ್ಟು ತೊಂದರೆಯಾಗುತ್ತಿತ್ತು. ಈ ಸಮಸ್ಯೆಯನ್ನು ಸತೀಶ್ ಪೂಜಾರಿ ಅವರ ಗಮನಕ್ಕೆ ತಂದ ತಕ್ಷಣ ಅವರು ಸ್ಪಂದಿಸಿ, ನಿರಂತರ ಪ್ರಯತ್ನದ ಮೂಲಕ ಟಿಸಿ ಬದಲಾವಣೆಗೆ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಇಲ್ಲಿನ ಜನರಿಗೆ ಅನುಕೂಲವಾಗಿದೆ. ಈ ಕಾರ್ಯಕ್ಕೆ ಸಹಕರಿಸಿದ ಸತೀಶ್ ಪೂಜಾರಿ ಕೀಳಂಜೆ, ಬ್ರಹ್ಮಾವರ ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯ ಲೈನ್‌ಮ್ಯಾನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ತಿಳಿಸಿದರು.

ಸ್ಥಳೀಯರ ಬಹುದಿನಗಳ ವಿದ್ಯುತ್ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನಡೆದ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.