ಪಾಡಿ ಶ್ರೀ ಈಶ್ವರ ಇಗ್ಗುತ್ತಪ್ಪ ದೇವಾಲಯದಲ್ಲಿ ಶೃಧ್ಧಾಭಕ್ತಿಯ ಪತ್ತಲೋದಿ ಆರಾಧನೋತ್ಸವ ಸಂಪನ್ನ

0
5

ವಿರಾಜಪೇಟೆ : ಪವಿತ್ರ ಕಾವೇರಿ ತೀರ್ಥೋದ್ಭವದ ನಂತರ ತುಲಾ ಮಾಸದ ಹತ್ತನೇ ದಿನದಂದು ಆಚರಿಸಲಾಗುವ ಪ್ರಸಿದ್ಧ ‘ಪತ್ತಲೋದಿ ಆರಾಧನೋತ್ಸವವು ಕೊಡಗಿನ ಕುಲದೇವರಾದ ಕಕ್ಕಬ್ಬೆಯ ಪಾಡಿ ಶ್ರೀ ಈಶ್ವರ ಇಗ್ಗುತಪ್ಪ ದೇವಾಲಯದಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಸಂಪನ್ನಗೊಂಡಿತು.
ಪರದಂಡ ಕುಟುಂಬಸ್ಥರ ಮುಖಂಡತ್ವದಲ್ಲಿ ಆಚರಿಸಿಕೊಂಡು ಬರಲಾಗುತ್ತಿರುವ ಈ ವಿಶೇಷ ಆರಾಧನೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಉತ್ಸವದ ಹಿನ್ನೆಲೆಯಲ್ಲಿ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ ಹಾಗೂ ತುಲಾಭಾರ ಸೇವೆಗಳನ್ನು ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಧನ್ಯತೆ ಮೆರೆದರು. ಈ ಸಂದರ್ಭ ದೇವರ ನೃತ್ಯ , ಅನ್ನಪ್ರಸಾದ ಜರುಗಿತು. ಅರ್ಚಕ ಜಗದೀಶ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿಕೊಟ್ಟರು. ಕಕ್ಕಬ್ಬೆಯ ಪಾಡಿ ದೇವಾಲಯ ಮಾತ್ರವಲ್ಲದೆ, ಪೆರೂರು ಹಾಗೂ ನೆಲಜಿ ಗ್ರಾಮಗಳ ಶ್ರೀ ಇಗ್ಗುತಪ್ಪ ದೇವಾಲಯಗಳಲ್ಲೂ ಪತ್ತಾಲೋಧಿ ಉತ್ಸವವು ಬಹಳ ಸಂಭ್ರಮದಿಂದ ನೆರವೇರಿತು.

ದೇವಾಲಯದ ದೇವತಕ್ಕರು ಭಕ್ತ ಜನ ಸಂಘದ ಅಧ್ಯಕ್ಷ ಹಾಗೂ ಅಖಿಲ ಕೊಡವ ಸಮಾಜದ ಅಧ್ಯಕ್ಷರು ಆಗಿರುವ ದೇಶತಕ್ಕ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ದೇವರ ಸನ್ನಿಧಿಯಲ್ಲಿ ನಾಡಿನ ಸುಭಿಕ್ಷಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾತನಾಡಿ, “ಪತ್ತಲೋದಿ ದಿನವು ಇಗ್ಗುತಪ್ಪ ದೇವರ ಆರಾಧನೆಗೆ ಅತ್ಯಂತ ಶ್ರೇಷ್ಠ ಹಾಗೂ ಮಂಗಳಕರವಾದ ದಿನವಾಗಿದೆ. ನಾಡಿನ ಎಲ್ಲಾ ಭಕ್ತರಿಗೂ ದೇವರು ಆಯುರಾರೋಗ್ಯ, ಸುಖ-ಶಾಂತಿ ಹಾಗೂ ಕ್ಷೇಮಾಭಿವೃದ್ಧಿ ಕರುಣಿಸಲಿ” ಎಂದು ಪ್ರಾರ್ಥಿಸಿದರು.

ಈ ಸಂದರ್ಭ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ ವ್ಯವಸ್ಥಾಪನ ಸಮಿತಿ , ಭಕ್ತ ಜನ ಸಂಘದ ಸಮಿತಿ ಸದಸ್ಯರು ,ಪಾರು ಪತ್ತೇಗಾರ ಪರದಂಡ ಪ್ರಿನ್ಸ್ ತಮ್ಮಯ್ಯ, ಸಿಬ್ಬಂದಿಗಳು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

ವರದಿ: ಪ್ರಿತುನ್ ಪೂವಣ್ಣ