ತುಳು ಭಾಷೆಯನ್ನು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಲು ಭಾರತ ಸರ್ಕಾರ ಕ್ರಮ ಕೈಗೊಳ್ಳಬೇಕು: ರಾವಲ್ ಶ್ರೀ ಗಣೇಶ್ ಭಟ್

0
20

ಕಠ್ಮಂಡುವಿನಲ್ಲಿ ಭಾರತ–ನೇಪಾಳ ತುಳುವ ಮಹಾಸಭೆ – 2026 ಯಶಸ್ವಿ

ಕಠ್ಮಂಡು, ಅಕ್ಟೋಬರ್ 28: ಪ್ರಾಚೀನ ಸನಾತನ ಸಂಸ್ಕಾರ ಮತ್ತು ಪರಂಪರೆಯ ಮೂಲಗಳನ್ನು ಹೊಂದಿರುವ ತುಳು ಭಾಷೆಯನ್ನು ಭಾರತ ಸರ್ಕಾರವು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಿ ಗೌರವಿಸಬೇಕು. ವಿಶ್ವದಾದ್ಯಂತ ನೆಲೆಸಿರುವ ತುಳುವರ ಭಾವೈಕ್ಯತೆಯನ್ನು ಬೆಳೆಸುವ ಮೂಲಕ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಬಲಪಡಿಸಬೇಕು ಎಂದು ಶ್ರೀ ಪಶುಪತಿನಾಥ ದೇವಸ್ಥಾನದ ಮುಖ್ಯ ಅರ್ಚಕರಾದ ಗೌರವಾನ್ವಿತ ರಾವಲ್ ಶ್ರೀ ಗಣೇಶ್ ಭಟ್ ಅವರು ಕರೆ ನೀಡಿದರು.

ನೇಪಾಳದ ಕಠ್ಮಂಡುವಿನಲ್ಲಿ ಅಕ್ಟೋಬರ್ 28ರಂದು ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ನೇಪಾಳ ಘಟಕದ ಸಾರಥ್ಯದಲ್ಲಿ ನಡೆದ ಭಾರತ–ನೇಪಾಳ ತುಳುವ ಮಹಾಸಭೆ – 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತುಳುವ ಮಹಾಸಭೆಯ ಚಳವಳಿಯನ್ನು ಜಾಗತಿಕ ಮಟ್ಟಕ್ಕೆ ಬೆಳೆಸುವ ಉದ್ದೇಶ: ಡಾ. ರಾಜೇಶ್ ಕೃಷ್ಣ ಆಳ್ವ

ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಕೇಂದ್ರೀಯ ಕಾರ್ಯಾಧ್ಯಕ್ಷರಾದ ಡಾ. ರಾಜೇಶ್ ಕೃಷ್ಣ ಆಳ್ವ ಮಾತನಾಡಿ, ತುಳುವ ಮಹಾಸಭೆಯ ಚಳವಳಿಯು ಶತಮಾನದ ಹೊಸ್ತಿಲಲ್ಲಿರುವ ಈ ಸಂದರ್ಭದಲ್ಲಿ ಮಹಾಸಭೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಮಹತ್ವದ ಹೆಜ್ಜೆಯಾಗಿ ಭಾರತ–ನೇಪಾಳ ತುಳುವ ಮಹಾಸಭೆ ರೂಪುಗೊಂಡಿದೆ ಎಂದು ಹೇಳಿದರು.

ಇದು ತುಳುವ ಮಹಾಸಭೆಯ ಅಂತರರಾಷ್ಟ್ರೀಯ ಮಟ್ಟದ ಪ್ರಥಮ ಕಾರ್ಯಕ್ರಮವಾಗಿದ್ದು, “ಗಡಿ ದಾಟಿದ ತುಳುವರ ವೈಭವ” ಎಂಬ ಆಶಯದೊಂದಿಗೆ ಜಗತ್ತಿನಾದ್ಯಂತ ನೆಲೆಸಿರುವ ತುಳುವರನ್ನು ಒಂದೇ ವೇದಿಕೆಗೆ ತರುವುದು ಹಾಗೂ ತುಳುವರ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಈಗಾಗಲೇ 18 ರಾಷ್ಟ್ರಗಳಲ್ಲಿ ತುಳುವ ಮಹಾಸಭೆಯ ಘಟಕಗಳನ್ನು ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ತುಳುವರ ಭಾವೈಕ್ಯತೆ, ಭಾಷಾ ಸಂರಕ್ಷಣೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಇನ್ನಷ್ಟು ಬಲಪಡಿಸುವ ಕಾರ್ಯ ಮುಂದುವರಿಯಲಿದೆ ಎಂದರು.

ಭಾರತ–ನೇಪಾಳ ಸಾಂಸ್ಕೃತಿಕ ಸಂಬಂಧಕ್ಕೆ ತುಳುವ ಕರ್ನಾಟಕದ ಕೊಡುಗೆ ಅಪಾರ: ಡಾ. ಭರತ್ ಜಂಗಮ್

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನೇಪಾಳದ ಕರ್ನಾಟಕ ಮೂಲದ ನ್ಯಾಯವಾದಿ ಹಾಗೂ ಹಿರಿಯ ಸಾಮಾಜಿಕ ಹೋರಾಟಗಾರ ಡಾ. ಭರತ್ ಜಂಗಮ್ ಅವರು ಮಾತನಾಡಿ, ಭಾರತ ಮತ್ತು ನೇಪಾಳದ ಸನಾತನ ಸಂಸ್ಕೃತಿಗೆ ತುಳುವ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು. ನಾಣ್ಯ ದೇವನ ಕಾಲಘಟ್ಟದಿಂದ ಇಂದಿನವರೆಗೂ ತುಳುವ ಕರ್ನಾಟಕದ ಮೂಲಕ ಭಾರತ–ನೇಪಾಳದ ನಡುವೆ ವಿವಿಧ ಸಂಪರ್ಕ ಸೇತುವೆಗಳು ಬೆಳೆದು ಬಂದಿವೆ ಎಂದು ಅಭಿಪ್ರಾಯಪಟ್ಟರು. ಈ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದರು.

ತುಳುನಾಡ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ

ಕಾರ್ಯಕ್ರಮವು ತುಳುನಾಡ ಗೀತೆಯ ಸಮೂಹ ಗಾಯನದೊಂದಿಗೆ ಆರಂಭವಾಯಿತು. 125 ವರ್ಷಗಳ ಪರಂಪರೆಯನ್ನು ಹೊಂದಿರುವ ತುಳುನಾಡ ಗೀತೆಗೆ ಈ ಸಂದರ್ಭದಲ್ಲಿ ಗೌರವ ಸಲ್ಲಿಸಲಾಯಿತು. ತುಳುವರ ಭಾಷಾಭಿಮಾನ, ಸಾಂಸ್ಕೃತಿಕ ಅಸ್ಮಿತೆ ಮತ್ತು ಏಕತೆಯನ್ನು ಪ್ರತಿಬಿಂಬಿಸಿದ ಈ ಗಾಯನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.

ಕಾರ್ಯಕ್ರಮಕ್ಕೆ ಶ್ರೀ ಜಯಪ್ರಕಾಶ್ ಪೂಜಾರಿ ಸ್ವಾಗತ ಕೋರಿದರು. ತುಳುವರ್ಲ್ಡ್ ಫೌಂಡೇಶನ್‌ನ ಅಧ್ಯಕ್ಷರಾದ ಶ್ರೀಮತಿ ಭಾನುಮತಿ ಶೆಟ್ಟಿ ಕಕ್ವಗುತ್ತು ಅಧ್ಯಕ್ಷತೆ ವಹಿಸಿದ್ದರು.

ವಿಚಾರ ಸಂಕಿರಣ ಮತ್ತು ಪ್ರಬಂಧ ಮಂಡನೆ

ವಿಚಾರ ಸಂಕಿರಣದಲ್ಲಿ ಶ್ರೀ ವೆಂಕಟರಮಣ ಡಿ. ಶೆಣೈ ಅವರು “ಕೊಂಕಣ ಮತ್ತು ತುಳುನಾಡು”, ಶ್ರೀ ಪ್ರಮೋದ್ ಸಪ್ರೆ ಅವರು “ತುಳುವರಿಗೆ ಮಂದಾರ ರಾಮಾಯಣದ ಮಹತ್ವ” ಹಾಗೂ ಶ್ರೀ ಅರವಿಂದ ಬೆಳ್ಚಾಡ ಅವರು “ತುಳುವೇಶ್ವರ ದೇವಸ್ಥಾನದ ಇತಿಹಾಸ” ವಿಷಯಗಳ ಕುರಿತು ಪ್ರಬಂಧ ಮಂಡಿಸಿದರು.

ಬಸ್ರೂರಿನ ತುಳುವೇಶ್ವರಿ ಸಾನಿಧ್ಯ ಮತ್ತು ಶ್ರೀಚಕ್ರದ ಕುರಿತು ವಿಶೇಷ ಚಿಂತನ–ಮಂಥನ ನಡೆಯಿತು. ಈ ಸಂದರ್ಭದಲ್ಲಿ ಐತಿಹಾಸಿಕ ಮಾಹಿತಿ, ಸ್ಥಳೀಯ ನಂಬಿಕೆಗಳು, ಮೌಖಿಕ ಪರಂಪರೆಗಳು ಹಾಗೂ ತುಳುನಾಡು–ನೇಪಾಳದ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ಕುರಿತು ಚರ್ಚಿಸಲಾಯಿತು.

ದೇವಸ್ಥಾನದ ಅರ್ಚಕರಿಗೆ ಗೌರವ

ಕಾರ್ಯಕ್ರಮದಲ್ಲಿ ಶ್ರೀ ಪಶುಪತಿನಾಥ ದೇವಸ್ಥಾನದ ಅರ್ಚಕರಾದ ಶಿರಸಿಯ ಶ್ರೀ ಗಿರೀಶ ಭಟ್ಟ, ಬಾರ್ಕೂರು–ಬ್ರಹ್ಮಾವರದ ಶ್ರೀ ವಿನಯ ಅಡಿಗರು ಹಾಗೂ ನೇಪಾಳದ ಶ್ರೀ ವಾಸುಕಿ ದೇವಸ್ಥಾನದ ಅರ್ಚಕರಾದ ಶ್ರೀ ರಾಘವೇಂದ್ರ ಭಟ್ಟ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಮಹಾಮಂಡಲದ ಸಂಸ್ಥಾಪಕರಾದ ಚಂದ್ರಶೇಖರ ವಿ. ಶೆಟ್ಟಿ ಉಪಸ್ಥಿತರಿದ್ದರು. ಭಾರತದ ತುಳುವ ಮಹಾಸಭೆಯ ಪ್ರಮುಖರಾದ ಶ್ರೀ ವಿಜಿತ್ ಶೆಟ್ಟಿ, ಪ್ರಧಾನ ಸಂಚಾಲಕರು, ನಿನ್ನಿಕಲ್ಲು ಪಾದೆ ಅಭಿವೃದ್ಧಿ ಸಮಿತಿ; ಶ್ರೀ ಪುನೀತ್ ಮುಂಡ್ಕೂರು, ಸಂಪಾದಕರು, ತುಳುನಾಡು ವಾರ್ತೆ; ಶ್ರೀ ಅರುಣ್ ಸನಿಲ್, ಉದ್ಯಮಿ, ಮುಂಬೈ; ಹಾಗೂ ಶ್ರೀಮತಿ ಶೋಭಾ ಉಡುಪ, ಕಾರ್ಯದರ್ಶಿ, ತುಳುನಾಡ ಸಮಾಜ, ಮೀರಾ–ಭಾಯಂದರ್ ಭಾಗವಹಿಸಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ವಿನಯ ಮುಲ್ಕಿ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ರಚಿತಾ ಮುಲ್ಕಿ, ರೇಖಾ ಪೂಜಾರಿ ಮೀರಾರೋಡ್, ಶ್ರೀಮತಿ ಕೋಟ್ಯನ್, ಉತ್ತಮ್ ಸಿಂಗ್ ಸೇರಿದಂತೆ ಹಲವರು ಸಹಕರಿಸಿದರು. ವಿವಿಧ ಜನಪದ ಸಾಂಸ್ಕೃತಿಕ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

“ಗಡಿ ದಾಟಿದ ತುಳುವರ ವೈಭವ” ಎಂಬ ಆಶಯದೊಂದಿಗೆ ನಡೆದ ಭಾರತ–ನೇಪಾಳ ತುಳುವ ಮಹಾಸಭೆಯು ತುಳುವರ ಜಾಗತಿಕ ಭಾವೈಕ್ಯತೆ, ಭಾಷಾ ಸಂರಕ್ಷಣೆ ಮತ್ತು ಭಾರತ–ನೇಪಾಳದ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಯಿತು.