ಮಿಯ್ಯಾರು ಮೊರಾರ್ಜಿ ವಸತಿ ಶಾಲೆಯಲ್ಲಿ ಆಘಾತಕಾರಿ ಘಟನೆ : 13 ವರ್ಷದ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವು

0
41

ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಷಾದನೀಯ ಘಟನೆಯೊಂದು ಸಂಭವಿಸಿದ್ದು, 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 13 ವರ್ಷದ ವಿದ್ಯಾರ್ಥಿನಿಯೊಬ್ಬಳು ದಿಢೀರ್ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.

ಮೃತ ವಿದ್ಯಾರ್ಥಿನಿಯನ್ನು ಬಾಗಲಕೋಟೆ ಮೂಲದ ಮೇಘನಾ (13) ಎಂದು ಗುರುತಿಸಲಾಗಿದೆ. ಬುಧವಾರ ಬೆಳಗ್ಗೆ ಸುಮಾರು 6 ಗಂಟೆಯ ವೇಳೆಗೆ ಮೇಘನಾ ದಿಢೀರ್ ಮೂರ್ಛೆ ತಪ್ಪಿ ಕುಸಿದು ಬಿದ್ದಿದ್ದಾಳೆ ಎನ್ನಲಾಗಿದೆ.

ಕೂಡಲೇ ಎಚ್ಚೆತ್ತುಕೊಂಡ ಶಾಲಾ ಸಿಬ್ಬಂದಿ ವಿದ್ಯಾರ್ಥಿನಿಯನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ವಿದ್ಯಾರ್ಥಿನಿಯನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ಚಿಕ್ಕ ವಯಸ್ಸಿನ ವಿದ್ಯಾರ್ಥಿನಿಯ ಅಕಾಲಿಕ ಸಾವಿನಿಂದ ಶಾಲಾ ವಲಯದಲ್ಲಿ ವಿಷಾದದ ವಾತಾವರಣ ನಿರ್ಮಾಣವಾಗಿದೆ. ಘಟನೆಯ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.