ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರ ನಿರಂತರ ಪ್ರಯತ್ನಕ್ಕೆ ಫಲ : ಕೆ.ಜಿ. ರೋಡ್–ಪೆರಡೂರು ರಸ್ತೆಯ ಅಪಾಯಕಾರಿ ಪೊದೆಗಳ ಕಟಾವು

0
13

20 ವರ್ಷಗಳಿಂದ ನಿಸ್ವಾರ್ಥ ಸಾರ್ವಜನಿಕ ಸೇವೆ – ಸಾಮಾಜಿಕ ಕಾರ್ಯಕರ್ತರ ಕಾರ್ಯಕ್ಕೆ ಸ್ಥಳೀಯರ ಮೆಚ್ಚುಗೆ

ಉಡುಪಿ : ಕೆ.ಜಿ. ರೋಡ್‌ನಿಂದ ಪೆರಡೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿ ಬೆಳೆದು ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದ ಅಪಾಯಕಾರಿ ಹುಲ್ಲಿನ ಪೊದೆಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರ ನಿರಂತರ ಮನವಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗಿನ ಸಂಪರ್ಕದ ಫಲವಾಗಿ ಈ ಕಾರ್ಯಕ್ಕೆ ಚಾಲನೆ ದೊರೆತಿದೆ.

ಈ ರಸ್ತೆಯ ಬದಿಯಲ್ಲಿ ಬೆಳೆದಿದ್ದ ಹುಲ್ಲು ಮತ್ತು ಪೊದೆಗಳು ರಸ್ತೆಗೆ ಬಾಗಿಕೊಂಡಿದ್ದರಿಂದ ವಾಹನ ಸವಾರರು, ಪಾದಚಾರಿಗಳು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ರೈತರು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದರು. ಅಲ್ಲದೆ, ಪೊದೆಗಳ ಮರೆಯಲ್ಲಿ ವಿಷಜಂತುಗಳು ಹಾಗೂ ಕಾಡುಪ್ರಾಣಿಗಳು ಅಡಗಿರುವ ಸಾಧ್ಯತೆಯಿಂದ ಸಾರ್ವಜನಿಕರಲ್ಲಿ ಆತಂಕವೂ ಮನೆಮಾಡಿತ್ತು. ರಸ್ತೆ ಬದಿಯಲ್ಲಿ ಯಾವುದೇ ಪ್ರಾಣಿ ಕುಳಿತಿದ್ದರೂ ದಟ್ಟವಾದ ಪೊದೆಗಳಿಂದಾಗಿ ಅದು ವಾಹನ ಸವಾರರಿಗೆ ತಕ್ಷಣ ಗೋಚರಿಸದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಸಮಸ್ಯೆಯನ್ನು ಮನಗಂಡ ಸ್ಥಳೀಯ ಸಾರ್ವಜನಿಕರು ಪ್ರತಿ ವರ್ಷದಂತೆ ಈ ವರ್ಷವೂ ಸತೀಶ್ ಪೂಜಾರಿ ಕೀಳಂಜೆ ಅವರ ಗಮನಕ್ಕೆ ತಂದಿದ್ದರು. ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಅವರು ಕೂಡಲೇ ಕಾರ್ಯಪ್ರವೃತ್ತರಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಸಮಸ್ಯೆಯ ಗಂಭೀರತೆಯನ್ನು ವಿವರಿಸಿದರು. ಪತ್ರಿಕೆಗಳ ಮೂಲಕವೂ ಸಾರ್ವಜನಿಕರ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದು, ಅಪಾಯಕಾರಿ ಪೊದೆಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದರು.

ಇದೀಗ ಅಧಿಕಾರಿಗಳು ಪೊದೆಗಳ ಕಟಾವು ಕಾರ್ಯ ಕೈಗೊಂಡಿದ್ದು, ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ರೈತರಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಪೊದೆಗಳ ತೆರವಿನಿಂದ ರಸ್ತೆ ಬದಿಯ ಗೋಚರತೆ ಸುಧಾರಿಸಿ, ಸಂಚಾರದ ವೇಳೆ ಎದುರಾಗುತ್ತಿದ್ದ ಆತಂಕ ಕಡಿಮೆಯಾಗಲಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

20 ವರ್ಷಗಳಿಂದ ಪ್ರತಿಫಲಾಪೇಕ್ಷೆಯಿಲ್ಲದ ಸಾರ್ವಜನಿಕ ಸೇವೆ

ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರು ಕಳೆದ ಸುಮಾರು 20 ವರ್ಷಗಳಿಂದ ಯಾವುದೇ ಫಲಾಪೇಕ್ಷೆಯಿಲ್ಲದೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಉಡುಪಿ ಹಾಗೂ ಬ್ರಹ್ಮಾವರ ತಾಲೂಕುಗಳ ವ್ಯಾಪ್ತಿಯಲ್ಲಿ ಜನರು ಎದುರಿಸುವ ವಿವಿಧ ಸಾರ್ವಜನಿಕ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಯಾವುದೇ ಸಮಸ್ಯೆಯನ್ನು ಅವರ ಗಮನಕ್ಕೆ ತಂದಾಗ ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣ ದೂರವಾಣಿ ಮೂಲಕ ಸಂಪರ್ಕಿಸಿ ಪರಿಹಾರಕ್ಕೆ ಪ್ರಯತ್ನಿಸುವ ಅವರ ಕಾರ್ಯವೈಖರಿ ಮೆಚ್ಚುವಂತದ್ದು. ಕೆ.ಜಿ. ರೋಡ್–ಪೆರಡೂರು ರಸ್ತೆಯ ಅಪಾಯಕಾರಿ ಹುಲ್ಲಿನ ಪೊದೆಗಳನ್ನು ಪ್ರತಿವರ್ಷ ಅಧಿಕಾರಿಗಳ ಗಮನಕ್ಕೆ ತಂದು ಕಟಾವು ಮಾಡಿಸಲು ಶ್ರಮಿಸುತ್ತಿರುವುದು ಸ್ಥಳೀಯರಿಗೆ ಸಂತಸ ತಂದಿದೆ ಎಂದು ಉಡುಪಿ ಉದ್ಯಮಿ ಸುರೇಶ್ ಬಿ. ಶೆಟ್ಟಿ ಹಾವಂಜೆ ಹಾಗೂ ಊರಿನ ಹಿರಿಯರಾದ ಯಾದವ್ ಶೆಟ್ಟಿ ಬಾಣಬೆಟ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜನರ ಸಮಸ್ಯೆಗಳಿಗೆ ಸ್ಪಂದಿಸುವ ಇಂತಹ ಸಾಮಾಜಿಕ ಕಾರ್ಯಕರ್ತರು ನಮ್ಮ ಗ್ರಾಮದಲ್ಲಿರುವುದು ಸಂತೋಷದ ಸಂಗತಿ. ಸತೀಶ್ ಪೂಜಾರಿ ಕೀಳಂಜೆ ಅವರು ಸಾರ್ವಜನಿಕರ ಪಾಲಿಗೆ ಆಪತ್ಬಾಂಧವರಾಗಿ ಗುರುತಿಸಿಕೊಂಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.