ಉಡುಪಿ : ಬಾಡಿಗೆ ಮುಂಗಡ (ಅಡ್ವಾನ್ಸ್) ಹಣ ಹಿಂತಿರುಗಿಸುವ ವಿಚಾರದಲ್ಲಿ ಮನೆ ಮಾಲೀಕನೊಂದಿಗೆ ಜಗಳ ತೆಗೆದು, ಅವರ ಮೇಲೆ ಆಸಿಡ್ ಎರಚಿ ತಲವಾರ್ನಿಂದ ಕೊಲೆಗೆ ಯತ್ನಿಸಿದ ಆರೋಪಿಯನ್ನು ಉಡುಪಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕುಂಜಿಬೆಟ್ಟು ನಿವಾಸಿ, ಪ್ರಸ್ತುತ ಎಂಜಿಎಂ ಮೈದಾನ ಬಳಿ ಬಾಡಿಗೆ ಮನೆಯಲ್ಲಿ ವಾಸವಿರುವ ಸುರೇಶ್ ಆಚಾರ್ಯ (48) ಎಂದು ಗುರುತಿಸಲಾಗಿದೆ.
ಬಾಧಿತ ಮನೆ ಮಾಲೀಕ ನವೀನ್ ಕುಮಾರ್ (58) ಅವರು ಕಲ್ಕೂರು ಬಿಲ್ಡಿಂಗ್ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಆರೋಪಿ ಸುರೇಶ್ ಆಚಾರ್ಯನು ನವೀನ್ ಕುಮಾರ್ ಅವರ ಮನೆಯಲ್ಲಿ ಬಾಡಿಗೆಗಿದ್ದು, ಇತ್ತೀಚೆಗೆ ಮನೆ ಖಾಲಿ ಮಾಡಿದ್ದನು. ಮನೆಗೆ ₹20,000 ಮುಂಗಡ ಹಣ ನೀಡಿದ್ದು, ಮನೆ ಖಾಲಿ ಮಾಡುವಾಗ ಗೋಡೆ ಹಾಗೂ ಟ್ಯಾಪ್ಗಳನ್ನು ಹಾಳು ಮಾಡಿದ್ದರಿಂದ 2 ತಿಂಗಳ ಬಾಡಿಗೆ ಮತ್ತು ದುರಸ್ತಿ ವೆಚ್ಚವನ್ನು ಮುಂಗಡ ಹಣದಲ್ಲಿ ಕಡಿತಗೊಳಿಸುವುದಾಗಿ ನವೀನ್ ಕುಮಾರ್ ತಿಳಿಸಿದ್ದರು. ಇದಕ್ಕೆ ಒಪ್ಪದ ಆರೋಪಿ, ಪೂರ್ಣ ₹20,000 ಹಣವನ್ನು ನೀಡಬೇಕೆಂದು ಪಟ್ಟು ಹಿಡಿದು ಬೆದರಿಕೆ ಹಾಕಿದ್ದನು. ಅಕ್ಟೋಬರ್ 28ರಂದು ಸಂಜೆ ಸುಮಾರು ಸುರೇಶ್ ಆಚಾರ್ಯ ಅಂಗಡಿಗೆ ಬಂದು ಏರು ಧ್ವನಿಯಲ್ಲಿ ಜಗಳ ಮಾಡಿದ್ದಾನೆ. ನಂತರ ಹೊರಗೆ ಹೋಗಿ ತನ್ನ ದ್ವಿಚಕ್ರ ವಾಹನದಲ್ಲಿದ್ದ ಆಸಿಡ್ ಬಾಟಲಿ ಹಾಗೂ ತಲವಾರ್ ತಂದು, “ನಿನಗೆ ಆಸಿಡ್ ಹಾಕಿ ಸುಟ್ಟು ಕೊಲ್ಲುತ್ತೇನೆ, ಆಮೇಲೆ ಕತ್ತಿಯಿಂದ ಕಡಿಯುತ್ತೇನೆ” ಎಂದು ಬೆದರಿಕೆ ಹಾಕಿ ನವೀನ್ ಕುಮಾರ್ ಅವರ ಮೈಮೇಲೆ ಆಸಿಡ್ ಎರಚಿದ್ದಾನೆ.
ನಂತರ ತಲವಾರ್ನಿಂದ ಕಡಿಯಲು ಬಂದಾಗ ನವೀನ್ ಕುಮಾರ್ ಅವರು ಅವಿತುಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದಾಳಿಯಿಂದ ನವೀನ್ ಅವರ ಮುಖ, ಬಲ ಕೈ, ಎಡ ಕೈ, ಸೊಂಟ, ಹೊಟ್ಟೆ ಹಾಗೂ ಪಾದದ ಭಾಗ ಸುಟ್ಟು ಗಾಯಗಳಾಗಿದ್ದು, ಪ್ರಸ್ತುತ ಕೆ.ಎಂ.ಸಿ ಆಸ್ಪತ್ರೆಯ ಬರ್ನಿಂಗ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಶೇಷ ತಂಡವು ತಕ್ಷಣ ಕಾರ್ಯಪ್ರವೃತ್ತರಾಗಿ, ಶಿವಳ್ಳಿ ಗ್ರಾಮದ ಎಂ.ಜಿ.ಎಂ ಬಳಿ ಆರೋಪಿಯನ್ನು ವಶಕ್ಕೆ ಪಡೆದಿದೆ.
ಆರೋಪಿಯಿಂದ ಕೃತ್ಯಕ್ಕೆ ಬಳಸಲಾದ ಬಿಳಿ ಬಣ್ಣದ ಹೋಂಡಾ ಹಾಗೂ ತಲವಾರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಬಂಧಿತ ಸುರೇಶ ಆಚಾರ್ಯ ವಿಪರೀತ ಮದ್ಯವ್ಯಸನಿಯಾಗಿದ್ದು, ಮನೆಯಲ್ಲಿ ಚಿನ್ನ-ಬೆಳ್ಳಿಯ ಕುಸುರಿ ಕೆಲಸ ಮಾಡುವುದರ ಜೊತೆಗೆ ಪಾರ್ಟ್ಟೈಮ್ ಆಗಿ ‘ಸ್ವಿಗ್ಗಿ’ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

