ಮನೆಯ ನೆಲದಡಿ ಹೂತಿಟ್ಟಿದ್ದ ಮೂರು ಬೃಹತ್ ಡ್ರಮ್ಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ 500 ರೂಪಾಯಿ ನೋಟುಗಳ ಕಂತೆಗಳು ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜ್ ಸಮೀಪದ ಬರೈಪುರ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಆದಾಯ ತೆರಿಗೆ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಗಂಗಾನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ನವಾಬ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರಾದ ರಾಕೇಶ್ ಯಾದವ್ ಮತ್ತು ರಾಜೇಶ್ ಯಾದವ್ ಎಂಬ ಸಹೋದರರ ಮನೆ ಮೇಲೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ಈ ಇಬ್ಬರು ಸಹೋದರರು ಈ ಹಿಂದೆ ಪುಣೆಯಲ್ಲಿ ಸಾಮಾನ್ಯ ಉದ್ಯೋಗದಲ್ಲಿದ್ದರು. 2020ರ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಕೆಲಸ ತೊರೆದು ಸ್ವಗ್ರಾಮಕ್ಕೆ ಮರಳಿದ್ದರು. ಗ್ರಾಮಕ್ಕೆ ಬಂದ ಕೆಲವೇ ದಿನಗಳಲ್ಲಿ ಅವರ ಜೀವನಶೈಲಿಯಲ್ಲಿ ಭಾರಿ ಬದಲಾವಣೆಯಾಗಿತ್ತು. ಎಕರೆಗಟ್ಟಲೆ ಜಮೀನು, ಟ್ರ್ಯಾಕ್ಟರ್ ಹಾಗೂ ದುಬಾರಿ ವಸ್ತುಗಳನ್ನು ಖರೀದಿಸುವ ಮೂಲಕ ಗ್ರಾಮಸ್ಥರ ಗಮನ ಸೆಳೆದಿದ್ದರು. ಅವರ ದಿಢೀರ್ ಆರ್ಥಿಕ ಬೆಳವಣಿಗೆ ಗ್ರಾಮದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಗ್ರಾಮಸ್ಥರ ದೂರಿನಿಂದ ಬಯಲಾದ ರಹಸ್ಯ!
ಇತ್ತೀಚೆಗೆ ಸಹೋದರರು ಮತ್ತು ಗ್ರಾಮಸ್ಥರ ನಡುವೆ ಜಗಳ ನಡೆದ ಸಂದರ್ಭದಲ್ಲಿ ಸ್ಥಳೀಯರೊಬ್ಬರು ಪೊಲೀಸರಿಗೆ ಕರೆ ಮಾಡಿ ಅವರ ಮನೆಯಲ್ಲಿ ಅಕ್ರಮ ಹಣ ಸಂಗ್ರಹಿಸಿಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಸುಳಿವಿನ ಆಧಾರದಲ್ಲಿ ನವಾಬ್ಗಂಜ್ ಮತ್ತು ಸೊರಾನ್ ಪೊಲೀಸ್ ಠಾಣೆಗಳ ಜಂಟಿ ತಂಡ ಮನೆ ಮೇಲೆ ದಾಳಿ ನಡೆಸಿತು.
ಆರಂಭದಲ್ಲಿ ಮನೆಯಾದ್ಯಂತ ಪರಿಶೀಲನೆ ನಡೆಸಿದರೂ ಯಾವುದೇ ಹಣ ಪತ್ತೆಯಾಗಿರಲಿಲ್ಲ. ಆದರೆ, ಕೊಠಡಿಯೊಂದರ ನೆಲದ ಮಣ್ಣು ಇತ್ತೀಚೆಗೆ ಅಗೆದು ಮುಚ್ಚಿರುವಂತೆ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ಅನುಮಾನ ಮೂಡಿದೆ. ಬಳಿಕ ಕಾರ್ಮಿಕರನ್ನು ಕರೆಸಿ ಆ ಜಾಗವನ್ನು ಅಗೆಸಿದಾಗ ಕಪ್ಪು ಪ್ಲಾಸ್ಟಿಕ್ನಿಂದ ಸುತ್ತಿ ಹೂತಿಟ್ಟಿದ್ದ ಮೂರು ಬೃಹತ್ ಡ್ರಮ್ಗಳು ಪತ್ತೆಯಾಗಿವೆ.
ಡ್ರಮ್ಗಳಲ್ಲಿ 500 ರೂಪಾಯಿ ನೋಟುಗಳ ಕಂತೆ!
ಡ್ರಮ್ಗಳನ್ನು ತೆರೆದು ಪರಿಶೀಲಿಸಿದಾಗ ಅವುಗಳ ಒಳಗೆ 500 ರೂಪಾಯಿ ಮುಖಬೆಲೆಯ ನೋಟುಗಳ ಕಂತೆಗಳು ಪತ್ತೆಯಾಗಿವೆ. ಹಣದ ಪ್ರಮಾಣ ಕೋಟ್ಯಂತರ ರೂಪಾಯಿ ಇರಬಹುದೆಂದು ಅಂದಾಜಿಸಲಾಗಿದ್ದು, ಸಂಪೂರ್ಣ ಎಣಿಕೆ ಕಾರ್ಯದ ಬಳಿಕ ನಿಖರ ಮೊತ್ತ ತಿಳಿಯಲಿದೆ.
ಘಟನಾ ಸ್ಥಳವನ್ನು ಅಧಿಕಾರಿಗಳು ಸೀಲ್ ಮಾಡಿದ್ದು, ಕುಟುಂಬದ ಒಬ್ಬ ಸದಸ್ಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಹಣದ ಮೂಲ ಹಾಗೂ ಸಹೋದರರ ಆರ್ಥಿಕ ವ್ಯವಹಾರಗಳ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ಸೇರಿದಂತೆ ಸಂಬಂಧಪಟ್ಟ ತನಿಖಾ ಸಂಸ್ಥೆಗಳು ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸುತ್ತಿವೆ.

