ಮಹಿಳೆಯರಿಗೆ ಆಧ್ಯಾತ್ಮಿಕ ಚಿಂತನೆಯಿಂದ ದೊರೆಯುವ ಆತ್ಮಾನಂದದ ಅರಿವನ್ನು ಉಂಟು ಮಾಡುವುದಕ್ಕಾಗಿ ಹೊಯ್ಗೆಬೈಲ್, ಉರ್ವದ ಸೌಜನ್ಯ ಮಹಿಳಾ ಮಂಡಲದಲ್ಲಿ ದಿನಾಂಕ 28-10-2026ರಂದು ‘ರಾಮಾಯಣ ಮಹಾಭಾರತದ ಜೀವನ ಮೌಲ್ಯಗಳು’ ಎಂಬ ವಿಷಯದ ಬಗ್ಗೆ ಒಂದು ಆಧ್ಯಾತ್ಮಿಕ ಚಿಂತನ ಕಾರ್ಯಕ್ರಮವು ನಡೆಯಿತು.
ವಿವಿಧ ಮಾಧ್ಯಮಗಳಲ್ಲಿ ತಮ್ಮ ಆಧ್ಯಾತ್ಮಿಕ ಜ್ಞಾನವನ್ನು ಹಂಚುತ್ತಿರುವ ಸಾಮಾಜಿಕ ಕಳಕಳಿಯ ಆಧ್ಯಾತ್ಮಿಕ ಚಿಂತಕರಾದ ಚೇತನಾ ಶ್ರೀಕೃಷ್ಣ ಭಟ್ ದೀಪವನ್ನು ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ರಾಮಾಯಣ ಮಹಾಭಾರತದಲ್ಲಿಯ ಜೀವನ ಮೌಲ್ಯಗಳು ಸಾರ್ವಕಾಲಿಕ ಸತ್ಯವಾದವುಗಳು. ಜೀವನದಲ್ಲಿ ಧರ್ಮ, ಭಕ್ತಿ, ಪ್ರೀತಿ, ವಿಶ್ವಾಸ ಹೇಗಿತ್ತು ಮತ್ತು ಹೇಗಿರಬೇಕು ಎಂಬುದನ್ನು ನಮ್ಮ ಧರ್ಮ ಗ್ರಂಥಗಳು ತಿಳಿಸಿಕೊಡುತ್ತವೆ.
ಅವುಗಳನ್ನು ಓದಿ ಅರ್ಥ ಮಾಡಿಕೊಂಡು ಬದುಕನ್ನು ಸುಂದರವಾಗಿಸಲು ಜೀವನದಲ್ಲಿ ಅಳವಡಿಸಿಕೊಳ್ಳುವುದು ಈಗ ಅಗತ್ಯವಾಗಿದೆ.” ಎನ್ನುತ್ತಾ ಆ ಬಗ್ಗೆ ತಮ್ಮ ಚಿಂತನೆಯ ಜ್ಞಾನವನ್ನು ವಿವರವಾಗಿ ಸದಸ್ಯೆಯರ ಮುಂದಿಟ್ಟರು. ಅವಧಿ ಮೀರಿದ್ದರೂ ಸದಸ್ಯೆಯರು ತದೇಕಚಿತ್ತರಾಗಿ ಮಾತುಗಳನ್ನು ಆಲಿಸಿ, ಮನನ ಮಾಡಿಕೊಂಡು, ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುದುದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಯಿತು. ಕಾರ್ಯಕ್ರಮದಲ್ಲಿ ಚೇತನಾ ಶ್ರೀಕೃಷ್ಣ ಭಟ್ ಇವರನ್ನು ಗೌರವಿಸಲಾಯಿತು.
ಮಂಡಲದ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ರತ್ನಾವತಿ ಜೆ. ಬೈಕಾಡಿ ಅತಿಥಿ ಪರಿಚಯ ಮಾಡಿ ಸ್ವಾಗತಿಸಿದರು. ಅಧ್ಯಕ್ಷೆ ರಮಾ ಎನ್. ಇವರ ಅಧ್ಯಕ್ಷೀಯ ಮಾತುಗಳ ಬಳಿಕ ಸದಸ್ಯೆ ಶೀಲಾ ಶೆಟ್ಟಿ ವಂದಿಸಿ, ಕಾರ್ಯದರ್ಶಿ ರಾಜೇಶ್ವರಿ ಎಸ್. ರಾವ್ ನಿರೂಪಿಸಿದರು.

