ಖಾಸಗಿ ಬಸ್–ಸ್ಕೂಟರ್ ನಡುವೆ ಅಪಘಾತ : ಯುವಕ ಮೃತ್ಯು

0
31

ಮೂಡುಬಿದಿರೆ : ಮಂಗಳೂರು–ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ತೋಡಾರು ಬಳಿ ಶುಕ್ರವಾರ ಸಂಜೆ ಖಾಸಗಿ ಬಸ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರ 19 ವರ್ಷದ ಯುವಕ ಮೃತಪಟ್ಟ ಘಟನೆ ನಡೆದಿದೆ.

ಮೃತ ಯುವಕನನ್ನು ತೋಡಾರು ನಿವಾಸಿ ರಿಫಾಝ್ (19) ಎಂದು ಗುರುತಿಸಲಾಗಿದೆ. ಇವರು ಮೂಡುಬಿದಿರೆಯ ಹಣ್ಣಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಖಾಸಗಿ ಬಸ್ಸೊಂದು ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಸರ್ವೀಸ್ ರಸ್ತೆಯ ಮೂಲಕ ಸಂಚರಿಸಬೇಕಿದ್ದ ಬಸ್, ವಿರುದ್ಧ ದಿಕ್ಕಿನ ರಸ್ತೆಯಲ್ಲಿ (ರಾಂಗ್ ಸೈಡ್) ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಮೃತಪಟ್ಟಿದ್ದಾನೆ.

ಅಪಘಾತದ ಬಳಿಕ ಬಸ್ಸಿನ ಚಾಲಕ ಹಾಗೂ ನಿರ್ವಾಹಕ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.