ಅನಿವಾಸಿ ಭಾರತೀಯ ವಿಭಾಗದಲ್ಲಿ ಸತೀಶ್ ಪೂಜಾರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

0
12

ದುಬೈ : ವಿದೇಶದಲ್ಲಿ ನೆಲೆಸಿದ್ದರೂ ತಾಯ್ನಾಡಿನೊಂದಿಗೆ ಅವಿನಾಭಾವ ಸಂಬಂಧವನ್ನು ಉಳಿಸಿಕೊಂಡು, ಸಮಾಜಸೇವೆ, ಶಿಕ್ಷಣ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ದುಬೈಯ ಅನಿವಾಸಿ ಭಾರತೀಯ ಸತೀಶ್ ಪೂಜಾರಿ ಅವರು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಅನಿವಾಸಿ ಭಾರತೀಯ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾಗಿ, ಬಿಲ್ಲವಾಸ್ ದುಬೈ ಸಂಘಟನೆಯ ಅಧ್ಯಕ್ಷರಾಗಿ ಹಾಗೂ ಹಲವು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿರುವ ಸತೀಶ್ ಪೂಜಾರಿ ಅವರು ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ.

ವಿಶೇಷವಾಗಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಆರ್ಥಿಕವಾಗಿ ಹಿಂದುಳಿದವರಿಗೆ ವೈದ್ಯಕೀಯ ಸಹಾಯ, ನಿರಾಶ್ರಿತರಿಗೆ ಆಸರೆ ನೀಡುವುದು ಹಾಗೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಕೊಡುಗೆ ನೀಡುವ ಮೂಲಕ ಸಮಾಜದ ವಿವಿಧ ವರ್ಗಗಳ ಜನರಿಗೆ ನೆರವಾಗಿದ್ದಾರೆ. ವಿದೇಶದಲ್ಲಿ ನೆಲೆಸಿದ್ದರೂ ತಮ್ಮ ಹುಟ್ಟೂರಿನ ಹಾಗೂ ತಾಯ್ನಾಡಿನ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿರುವ ಅವರ ಸೇವೆ ಗಮನಾರ್ಹವಾಗಿದೆ.

ಸಮಾಜದ ಏಳಿಗೆಗಾಗಿ ಹಲವು ವರ್ಷಗಳಿಂದ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅನಿವಾಸಿ ಕನ್ನಡಿಗರ ವಲಯದಲ್ಲಿ ಸಂತಸ ಮೂಡಿಸಿದೆ.

ತಾಯ್ನಾಡಿನಿಂದ ದೂರವಿದ್ದರೂ ಸಮಾಜದೊಂದಿಗಿನ ನಂಟನ್ನು ಉಳಿಸಿಕೊಂಡು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸತೀಶ್ ಪೂಜಾರಿ ಅವರ ಸಾಧನೆಗೆ ಈ ಪ್ರಶಸ್ತಿ ಮತ್ತೊಂದು ಗೌರವದ ಗರಿಯಾಗಿದೆ. ಅವರ ಆಯ್ಕೆಗೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಹಿತೈಷಿಗಳು ಹಾಗೂ ಅಭಿಮಾನಿಗಳು ಅಭಿನಂದನೆ ಸಲ್ಲಿಸಿ, ಮುಂದಿನ ಸಮಾಜಸೇವಾ ಕಾರ್ಯಗಳಿಗೆ ಶುಭ ಹಾರೈಸಿದ್ದಾರೆ.