
ಕಾಸರಗೋಡು: ಕೇರಳ ಕರ್ನಾಟಕಕ ಎರಡೂ ಸಹ ಶ್ರೇಷ್ಠ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ನಾಡುಗಳಾಗಿವೆ. ಹಾಗೆಯೇ ಭಾರತದ ವಿವಿಧ ರಾಜ್ಯಗಳು ಭಾಷಿಕವಾಗಿ ಭಿನ್ನವಾಗಿದ್ದರೂ ಸಾಂಸ್ಕೃತಿಕವಾಗಿ ಅವುಗಳ ನಡುವೆ ಗಾಢವಾದ ಸಾಮ್ಯತೆ ಮತ್ತು ಏಕತೆಯಿದ್ದು ಕೇರಳವು ಬಹುಭಾಷೆಗಳ ಸಂಗಮದಿಂದ ಹಲವು ಸಾಂಸ್ಕೃತಿಕ ಚಹರೆಗಳನ್ನು ಹೊಂದಿರುವ ನಾಡಾಗಿದೆ ಎಂದು ಕೇರಳ ಕೇಂದ್ರೀಯ ವಿವಿ ಕುಲಪತಿ ಪ್ರೊ. ಸಿದ್ದು ಪಿ. ಅಲಗೂರು ಅವರು ಹೇಳಿದರು.
ವಿಶ್ವವಿದ್ಯಾಲಯದ ಪಯಸ್ವಿನಿ ಸಭಾಂಗಣದಲ್ಲಿ ಕನ್ನಡ ವಿಭಾಗದ ವತಿಯಿಂದ ‘ಸಾಹಿತ್ಯ ಸಂಸ್ಕೃತಿ ಸಿರಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ವಿಶ್ವವಿದ್ಯಾಲಯಕ್ಕೆ ಬಂದು ಒಂದೂವರೆ ವರ್ಷಗಳಾಗಿದ್ದರೂ, ಸಂಪೂರ್ಣವಾಗಿ ವಿವಿ ವೇದಿಕೆಯಲ್ಲಿ ಕನ್ನಡದಲ್ಲಿ ಭಾಷಣ ಮಾಡುವ ಅವಕಾಶ ದೊರೆತಿರುವುದು ಇದೇ ಮೊದಲು, ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಪಂಪ, ಕುವೆಂಪು, ಬೇಂದ್ರೆ ಮೊದಲಾದ ಮಹಾನ್ ಕವಿಗಳ ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರ ಜೊತೆಗೆ, ಅವರ ವೃತ್ತಿ ಭವಿಷ್ಯಕ್ಕೆ ಪೂರಕವಾಗುವ ಹಾಗೂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಪಠ್ಯಕ್ರಮಗಳನ್ನೂ ರೂಪಿಸುವ ಕುರಿತು ಚಿಂತಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ, ಶಿಕ್ಷಣ ಕ್ರಾಂತಿಯ ಹರಿಕಾರ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ಗೌರವಸನ್ಮಾನ ಸ್ವೀಕರಿಸಿ ಮಾತನಾಡಿದ ಹರೇಕಳ ಹಾಜಬ್ಬ, ಪ್ರತಿಯೊಬ್ಬ ವಿದ್ಯಾರ್ಥಿಯೂ ಚೆನ್ನಾಗಿ ಓದಿ ಉನ್ನತ ಸ್ಥಾನಗಳನ್ನು ಅಲಂಕರಿಸುವಂತಾಗಬೇಕು ಎಂದರು. ಅತ್ಯಂತ ಬಡತನದ ಹಿನ್ನೆಲೆಯಿಂದ ಬಂದ ತಮ್ಮನ್ನು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳು ಸನ್ಮಾನಿಸುತ್ತಾರೆ ಎಂದು ಕನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ ಎಂದು ಭಾವುಕರಾದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ತೊಟ್ಟೆತೋಡಿ ಅವರು ‘ಕರಾವಳಿ ಕಲಾ ಸಂಪತ್ತು’ ವಿಷಯದ ಕುರಿತು ಉಪನ್ಯಾಸ ನೀಡಿದರು. ವಿಶ್ವವಿದ್ಯಾಲಯದ ಕುಲಸಚಿವ ಡಾ. ಜಯಪ್ರಕಾಶ್ ಆರ್, ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕ ಪ್ರೊ. ರಾಜೇಂದ್ರ ಪಿಲಾಂಕಟ್ಟ ಹಾಗೂ ಭಾಷೆ ಮತ್ತು ತೌಲನಿಕ ಅಧ್ಯಯನ ವಿಭಾಗದ ಡೀನ್ ಪ್ರೊ. ತಾರು ಎಸ್. ಪವಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಕನ್ನಡ ವಿಭಾಗದ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿಶ್ವವಿದ್ಯಾಲಯದ ಪ್ರಶಸ್ತಿ ವಿಜೇತ ಸಾಂಸ್ಕೃತಿಕ ತಂಡದ ಸಾಂಪ್ರದಾಯಿಕ ಕಲಾಪ್ರದರ್ಶನದ ಜೊತೆಗೆ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಖ್ಯಾತ ಕಲಾವಿದರ ಸಹಭಾಗಿತ್ವದಲ್ಲಿ ‘ಮಹಿಷಮರ್ದಿನಿ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆ ಪಡೆಯಿತು.
ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ. ಮಾಧವ ಎಂ.ಕೆ, ಪ್ರಸ್ತಾವನೆ ಮಾಡಿದರು, ಪ್ರಭಾರ ಮುಖ್ಯಸ್ಥ ಡಾ. ಪ್ರವೀಣ್ ಪಿ ವಂದಿಸಿದರು, ಚೇತನ್ ಮುಂಡಾಜೆ ನಿರೂಪಿಸಿದರು, ಪ್ರಾಧ್ಯಾಕರಾದ ಡಾ. ಸೌಮ್ಯ ಹೆಚ್, ಡಾ. ಗೋವಿಂದರಾಜು ಕೆ.ಎಂ, ಪ್ರೊ. ಮೋಹನ್, ಪ್ರೊ. ರಾಜಾನಾಯ್ಕ, ಪ್ರೊ. ಸುಬ್ರಮಣ್ಯ ಪೈಲೂರು, ಪ್ರೊ. ಗುರುಶಂಕರ, ಡಾ. ಸೆಂಥಿಲ್ ಕುಮಾರ್, ಡಾ. ಲಕ್ಷ್ಮಿ, ಕಾವ್ಯ ಪಿ ಹೆಗ್ಡೆ, ಡಾ. ಶಿವಕುಮಾರ್, ಕಿಶೋರ್ ನಗರೇಶಿ, ವಿದ್ಯಾರ್ಥಿ ಸಂಯೋಜಕರಾದ ಸಂಜಯ್ ಉಪ್ಪಿನ್, ಮನೀಷ್, ಪವನ್ ಕುಮಾರ್ ಸೇರಿದಂತೆ ಕನ್ನಡ ವಿಭಾಗದ ಹಿರಿಯ ಮತ್ತು ಪ್ರಸಕ್ತ ವರ್ಷದ ಸಂಶೋಧನಾರ್ಥಿಗಳು, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಡೀನರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.
