ದಕ್ಷಿಣ ಕನ್ನಡ: “ಸೇವೆ ಪುಣ್ಯ ಸಂಪಾದನೆಗಾಗಿ ಅಲ್ಲ, ಅದು ನಮ್ಮ ಕರ್ತವ್ಯ” ಎಂಬ ಧ್ಯೇಯವಾಕ್ಯದೊಂದಿಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಮಡಿಲು ಸೇವಾ ತಂಡಕ್ಕೆ 2025-26ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಕಳೆದ ಮೂರು ವರ್ಷ ನಾಲ್ಕು ತಿಂಗಳ ಅವಧಿಯಲ್ಲಿ ತಂಡವು ಒಟ್ಟು 345 ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸುವ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದೆ. ಅಗತ್ಯವಿರುವವರಿಗೆ ನೆರವಾಗುವುದು, ಸಂಕಷ್ಟದಲ್ಲಿರುವವರಿಗೆ ಆಸರೆಯಾಗುವುದು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಡಿಲು ಸೇವಾ ತಂಡವು ಮಾದರಿ ಸೇವಾ ಸಂಸ್ಥೆಯಾಗಿ ಬೆಳೆದಿದೆ.
ಪ್ರಚಾರ ಅಥವಾ ಪ್ರತಿಫಲದ ನಿರೀಕ್ಷೆಯಿಲ್ಲದೆ ಸೇವೆಯನ್ನೇ ಕರ್ತವ್ಯವೆಂದು ಪರಿಗಣಿಸಿ ತಂಡದ ಸದಸ್ಯರು ನಿರಂತರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ವಿಶೇಷವಾಗಿದೆ.
ತಂಡದ ಈ ಸೇವಾ ಸಾಧನೆಯನ್ನು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಎಲ್ಲಾ ಸದಸ್ಯರು ಹಾಗೂ ಸೇವಾ ಹಿತೈಷಿಗಳಲ್ಲಿ ಸಂತಸ ಮತ್ತು ಹೆಮ್ಮೆಯನ್ನು ಮೂಡಿಸಿದೆ.
ಈ ಗೌರವವು ತಂಡದ ಪ್ರತಿಯೊಬ್ಬ ಸದಸ್ಯರ ಪರಿಶ್ರಮ, ಸಹಕಾರ ಹಾಗೂ ಸೇವಾ ಮನೋಭಾವಕ್ಕೆ ಸಂದ ಮನ್ನಣೆಯಾಗಿದೆ. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಜನಪರ ಸೇವಾ ಕಾರ್ಯಗಳನ್ನು ಹಮ್ಮಿಕೊಂಡು ಸಮಾಜದ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಸಂಕಲ್ಪವನ್ನು ತಂಡ ಹೊಂದಿದೆ.
ಮಡಿಲು ಸೇವಾ ತಂಡದ ಈ ಸಾಧನೆಗೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಹಿತೈಷಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

