ಬೆಂಗಳೂರು: ಅಖಿಲ ಕರ್ನಾಟಕ ಕುಂಭ ವೈದ್ಯರ ಒಕ್ಕೂಟದ ದಶಮಾನೋತ್ಸವ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಹಾಗೂ ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆಯೋಜಿಸಲಾಯಿತು.

ಕಾರ್ಯದರ್ಶಿ ಡಾ. ಮಹೇಶ್ ಅವರು ಸಂಘದ ಪರಿಷ್ಕೃತ ಬೈಲಾವನ್ನು ಮಂಡಿಸಿ ಅನುಮೋದನೆ ಪಡೆದರು. ಸಂಘಟನೆಯ ಸ್ಥಾಪಕ ಹಾಗೂ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸರ್ವರನ್ನು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಪರಿಚಯಿಸಿ ಸನ್ಮಾನಿಸಲಾಯಿತು.
ಕುಂಭ ವೈದ್ಯರ ಒಕ್ಕೂಟವು ಸಮಾನ ಮನಸ್ಕ ಸಂಘಟನೆಗಳೊಂದಿಗೆ ಕೈಜೋಡಿಸಿ ಕುಂಬಾರ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಪ್ರಗತಿಗಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಲಿದೆ ಎಂದು ಡಾ. ಅಣ್ಣಯ್ಯ ಕುಲಾಲ್ ತಿಳಿಸಿದರು.
ಕೋಶಾಧಿಕಾರಿ ಡಾ. ರಾಜಶೇಖರ್, ಹಿರಿಯ ಸಲಹೆಗಾರರಾದ ಡಾ. ಸಾಗರ್ ಮೈಸೂರು, ಡಾ. ರಾಮಚಂದ್ರ, ಡಾ. ಮಂಜುನಾಥ್ ಶಿವಮೊಗ್ಗ, ಡಾ. ಪ್ರಕಾಶ್ ಮಲೇಷ್ಯಾ, ಡಾ. ಗೋವಿಂದ ಶೆಟ್ಟಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಹಿರಿಯ ಹಾಗೂ ಕಿರಿಯ ವೈದ್ಯರು, ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ ಮತ್ತು ಆಯುಷ್ ಕ್ಷೇತ್ರದ ವೈದ್ಯರು ಉಪಸ್ಥಿತರಿದ್ದರು.
ಸಂಘಟನೆಯ ಆರಂಭದ ದಿನಗಳಿಂದಲೂ ಸಹಕಾರ ನೀಡುತ್ತಾ ಬಂದಿರುವ ಅಖಿಲ ಭಾರತ ಕುಂಬಾರ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಿವಕುಮಾರ್ ಚೌಡ ಶೆಟ್ಟಿ ಅವರು ಸಾಧಕರನ್ನು ಸನ್ಮಾನಿಸಿ ಶುಭ ಹಾರೈಸಿದರು.
ಕುಂಭ ವೈದ್ಯರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಹಾಗೂ ಅಖಿಲ ಭಾರತ ಕುಂಬಾರ ಮಹಾಸಭಾದ ರಾಷ್ಟ್ರೀಯ ಯುವ ಅಧ್ಯಕ್ಷ ಡಾ. ನಾಗರಾಜ್ ಮಾತನಾಡಿ, ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಕುಂಬಾರ ಸಮುದಾಯದಲ್ಲಿ ರಾಜ್ಯಸಭೆ, ವಿಧಾನ ಪರಿಷತ್, ವಿಧಾನಸಭೆ ಹಾಗೂ ಸಂಸತ್ತನ್ನು ಪ್ರತಿನಿಧಿಸುವ ಸಾಮರ್ಥ್ಯವಿರುವ ಅನೇಕ ನಾಯಕರು ಇದ್ದಾರೆ. ಆದರೆ ರಾಜಕೀಯ ಪಕ್ಷಗಳು ಸಮುದಾಯಕ್ಕೆ ಸೂಕ್ತ ಸಾಮಾಜಿಕ ಮತ್ತು ರಾಜಕೀಯ ಪ್ರಾತಿನಿಧ್ಯ ನೀಡಲು ಹಿಂದೇಟು ಹಾಕುತ್ತಿವೆ ಎಂದು ಅಭಿಪ್ರಾಯಪಟ್ಟರು.
ಈ ಬಾರಿ ಕುಂಬಾರ ಸಮುದಾಯಕ್ಕೆ ಕೇವಲ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸ್ಥಾನಗಳಿಗೆ ಸೀಮಿತಗೊಳಿಸದೆ, ರಾಜ್ಯಸಭೆ, ವಿಧಾನ ಪರಿಷತ್, ಲೋಕಸಭೆ ಹಾಗೂ ವಿಧಾನಸಭೆಯಲ್ಲೂ ಸೂಕ್ತ ಅವಕಾಶ ನೀಡಬೇಕೆಂಬ ಬೇಡಿಕೆಯೊಂದಿಗೆ ರಾಷ್ಟ್ರಮಟ್ಟದ ಹೋರಾಟಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು.
ಒಕ್ಕೂಟದ ಉಪಾಧ್ಯಕ್ಷರಾದ ಡಾ. ಜಿ.ಬಿ. ಕುಂಭಾರ, ಡಾ. ಪೂರ್ಣಿಮಾ, ಡಾ. ಪದ್ಮಾವತಿ, ಡಾ. ರುಕ್ಮಿಣಿ, ಡಾ. ಮಂಜುಳಾ, ಡಾ. ರೂಪಶ್ರೀ ಸೇರಿದಂತೆ ಇತರರು ಕಾರ್ಯಕ್ರಮದ ಸಂಯೋಜನೆ ಹಾಗೂ ನಿರ್ವಹಣೆಯಲ್ಲಿ ಸಹಕರಿಸಿದರು.

