ಹಿಂದೂಗಳ ಹಬ್ಬಗಳ ಸಂದರ್ಭದಲ್ಲಿ ಮಾತ್ರ ನಿರ್ಬಂಧ ಹೇರುವುದು ತಾರತಮ್ಯದ ನಡೆ – ಸರ್ಕಾರದ ವಿರುದ್ಧ ಆಕ್ರೋಶ
ಶಬ್ದ ಮಾಲಿನ್ಯ ನಿಯಂತ್ರಣ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕಾನೂನುಗಳು ಯಾವುದೇ ಧರ್ಮದ ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು. ಆದರೆ ರಾಜ್ಯ ಸರ್ಕಾರ ಹಿಂದೂಗಳ ಧಾರ್ಮಿಕ ಹಬ್ಬಹರಿದಿನಗಳ ಸಂದರ್ಭದಲ್ಲಿ ಮಾತ್ರ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಜಿಲ್ಲಾ ಸಹ ಸಂಯೋಜಕ ಪುಷ್ಪರಾಜ್ ಕಮ್ಮಾಜೆ ಆರೋಪಿಸಿದ್ದಾರೆ.
ಬಕ್ರೀದ್ ಸಂದರ್ಭದಲ್ಲಿ ಪ್ರಾಣಿಗಳ ವಧೆ ಹಾಗೂ ಅದಕ್ಕೆ ಸಂಬಂಧಿಸಿದ ಪರಿಸರ ನಿಯಮಗಳ ಪಾಲನೆಯ ವಿಚಾರದಲ್ಲಿಯೂ ಸಂಬಂಧಪಟ್ಟ ಇಲಾಖೆಗಳು ಸಮಾನವಾಗಿ ಕಾನೂನು ಜಾರಿಗೊಳಿಸಬೇಕು. ಒಂದು ಧರ್ಮದ ಆಚರಣೆಗಳ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಮತ್ತೊಂದು ಧರ್ಮದ ವಿಚಾರದಲ್ಲಿ ಮೌನ ವಹಿಸುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.
ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೂ ಯಾವುದೇ ತಾರತಮ್ಯವಿಲ್ಲದೆ ಸಮಾನವಾಗಿ ಜಾರಿಗೊಳಿಸಬೇಕು. ಕಾನೂನು ಉಲ್ಲಂಘನೆಯಾಗುವ ಸಂದರ್ಭದಲ್ಲಿ ಧರ್ಮವನ್ನು ಪರಿಗಣಿಸದೆ ಕ್ರಮ ಕೈಗೊಳ್ಳುವುದು ಆಡಳಿತ ವ್ಯವಸ್ಥೆಯ ಜವಾಬ್ದಾರಿಯಾಗಿದೆ. ಹಿಂದೂಗಳ ಹಬ್ಬಗಳ ಸಂದರ್ಭದಲ್ಲಿ ಮಾತ್ರ ವಿಶೇಷ ನಿರ್ಬಂಧಗಳನ್ನು ವಿಧಿಸುತ್ತಿರುವ ಸರ್ಕಾರದ ನಡೆ ಅಲ್ಪಸಂಖ್ಯಾತರ ಓಲೈಕೆಯ ರಾಜಕಾರಣಕ್ಕೆ ಪುಷ್ಟಿ ನೀಡುತ್ತಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದೂಗಳ ಧಾರ್ಮಿಕ ಆಚರಣೆಗಳ ಮೇಲೆ ಅನಗತ್ಯ ನಿರ್ಬಂಧಗಳನ್ನು ಹೇರುವುದನ್ನು ರಾಜ್ಯ ಸರ್ಕಾರ ತಕ್ಷಣ ನಿಲ್ಲಿಸಬೇಕು. ಕಾನೂನು ಮತ್ತು ನಿಯಮಗಳು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯವಾಗಬೇಕು. ಹಿಂದೂ ಸಮಾಜದ ಸನಾತನ ಸಂಸ್ಕೃತಿ, ಸಂಪ್ರದಾಯ ಹಾಗೂ ಧಾರ್ಮಿಕ ಆಚರಣೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಸಂಭ್ರಮದಿಂದ ಆಚರಿಸುವ ಹಕ್ಕನ್ನು ಸರ್ಕಾರ ಗೌರವಿಸಬೇಕು. ಧಾರ್ಮಿಕ ವಿಚಾರಗಳಲ್ಲಿ ಯಾವುದೇ ರೀತಿಯ ತಾರತಮ್ಯ ಅಥವಾ ಏಕಪಕ್ಷೀಯ ನಿರ್ಬಂಧಗಳನ್ನು ಸಹಿಸುವುದಿಲ್ಲ ಎಂದು ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲಾ ಸಹ ಸಂಯೋಜಕ ಪುಷ್ಪರಾಜ್ ಕಮ್ಮಾಜೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

