ಉಡುಪಿ : ಶಿಕ್ಷಣ ನಗರಿ ಮಣಿಪಾಲ್ನ ಪಬ್ಗಳಲ್ಲಿ ನಡೆಯುತ್ತಿದೆ ಎನ್ನಲಾದ ಅನೈತಿಕ ಚಟುವಟಿಕೆಗಳ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಆರಂಭವಾಗಿದೆ. ಪಬ್ಗಳಲ್ಲಿ ಯುವಕ-ಯುವತಿಯರು ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯಗಳ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.
ಮಣಿಪಾಲ್ನ ಈಶ್ವರ ನಗರದ ಪಬ್ ಒಂದರಲ್ಲಿ ಯುವ ಜೋಡಿಯೊಂದು ಸಾರ್ವಜನಿಕರ ಎದುರೇ ಮದ್ಯಪಾನ ಮಾಡುತ್ತಾ ಚುಂಬಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಇನ್ನು ಕೆಲವು ವೀಡಿಯೊಗಳಲ್ಲಿ ಯುವಕ-ಯುವತಿಯರು ಅತಿಯಾದ ಮದ್ಯದ ಅಮಲಿನಲ್ಲಿ ತೂರಾಡುತ್ತಾ, ಸುತ್ತಮುತ್ತಲಿನ ಪರಿಸರದ ಅರಿವಿಲ್ಲದೆ ವರ್ತಿಸುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ.
ಮದ್ಯದ ಅಮಲಿನಲ್ಲಿ ನಿಯಂತ್ರಣ ಕಳೆದುಕೊಂಡು ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯಗಳು ಸಾರ್ವಜನಿಕರಿಗೆ ಮುಜುಗರ ಉಂಟುಮಾಡಿವೆ. ಇದೇ ವೇಳೆ ಕೆಲವು ಪಬ್ಗಳಲ್ಲಿ ಮಾದಕ ದ್ರವ್ಯಗಳ ಬಳಕೆಯೂ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಮಣಿಪಾಲ್ನಲ್ಲಿ ಇಂತಹ ಆರೋಪಗಳು ಕೇಳಿಬರುತ್ತಿರುವುದು ಪೋಷಕರು ಹಾಗೂ ಸಾರ್ವಜನಿಕರ ಕಳವಳಕ್ಕೆ ಕಾರಣವಾಗಿದೆ. ಪಬ್ಗಳಲ್ಲಿ ನಿಯಮಗಳ ಪಾಲನೆ, ಅಪ್ರಾಪ್ತರಿಗೆ ಮದ್ಯ ಮಾರಾಟ ತಡೆ ಹಾಗೂ ಮಾದಕ ದ್ರವ್ಯಗಳ ಬಳಕೆಯ ಕುರಿತು ಸಂಬಂಧಪಟ್ಟ ಪೊಲೀಸ್ ಇಲಾಖೆ ಮತ್ತು ಅಬಕಾರಿ ಅಧಿಕಾರಿಗಳು ಪರಿಶೀಲನೆ ನಡೆಸಿ, ಆರೋಪಗಳಲ್ಲಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳ ಆಧಾರದಲ್ಲಿ ಮಾತ್ರ ಆರೋಪಗಳನ್ನು ಸಾಬೀತಾದ ಸಂಗತಿಗಳೆಂದು ಪರಿಗಣಿಸಲಾಗದು. ಸಂಬಂಧಪಟ್ಟ ಅಧಿಕಾರಿಗಳ ತನಿಖೆಯಿಂದಲೇ ನೈಜಾಂಶ ಹೊರಬರಬೇಕಿದೆ.

