ಉಡುಪಿ : ಮೊಬೈಲ್ಗೆ ಬಂದ ಅನುಮಾನಾಸ್ಪದ ಸಂದೇಶವೊಂದನ್ನು ತೆರೆಯಲು ಪ್ರಯತ್ನಿಸಿದ ವ್ಯಕ್ತಿಯೊಬ್ಬರು ಸೈಬರ್ ವಂಚನೆಗೆ ಒಳಗಾಗಿ ಬರೋಬ್ಬರಿ ₹3,03,000 ಹಣ ಕಳೆದುಕೊಂಡ ಘಟನೆ ವರದಿಯಾಗಿದೆ.
ಕೊಡವೂರು ನಿವಾಸಿ ಪ್ರಸನ್ನ ಎಂಬವರು ನವೆಂಬರ್ 9ರಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಮನೆಯಲ್ಲಿದ್ದಾಗ ಅವರ ವಿವೋ Y20 ಮೊಬೈಲ್ಗೆ ‘PLAY LOOM’ ಎಂಬ ಸಂದೇಶ ಬಂದಿದೆ. ಅದನ್ನು ಅಳಿಸಲು ಪ್ರಯತ್ನಿಸಿದರೂ ಸಂದೇಶ ತೆರವಾಗಿರಲಿಲ್ಲ. ಇದೇ ವೇಳೆ ಮೊಬೈಲ್ ಪರದೆಯ ಮೇಲೆ ‘ಅಪ್ಡೇಟ್’ ಎಂಬ ಸೂಚನೆಯೂ ಕಾಣಿಸಿಕೊಂಡಿದೆ.
ಇದರಿಂದ ಗಾಬರಿಗೊಂಡ ಪ್ರಸನ್ನ ಅವರು ಮೊಬೈಲ್ ಸ್ವಿಚ್ ಆಫ್ ಮಾಡಿ, ಜಿಯೋ ಮತ್ತು ಬಿಎಸ್ಎನ್ಎಲ್ ಕಂಪನಿಗಳ ಸಿಮ್ ಕಾರ್ಡ್ಗಳನ್ನು ತೆಗೆದು ಮತ್ತೆ ಮೊಬೈಲ್ ಸ್ವಿಚ್ ಆನ್ ಮಾಡಿದ್ದಾರೆ. ಆದರೆ ನವೆಂಬರ್ 10ರಂದು ಬೆಳಿಗ್ಗೆ ಮೊಬೈಲ್ ಆನ್ ಮಾಡಿದಾಗಲೂ ‘ಅಪ್ಡೇಟ್’ ಸೂಚನೆ ಕಾಣಿಸಿಕೊಂಡಿದೆ.
ಈ ನಡುವೆ ಮೊಬೈಲ್ಗೆ ರೀಚಾರ್ಜ್ ಮಾಡಲು ಪ್ರಯತ್ನಿಸಿದಾಗ ಬ್ಯಾಂಕ್ ಖಾತೆಗಳಲ್ಲಿ ಹಣ ಇಲ್ಲದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಹಣ ಕಡಿತಗೊಂಡಿರುವುದು ತಿಳಿದುಬಂದಿದೆ. ಬ್ಯಾಂಕ್ ಆಫ್ ಬರೋಡಾ ಹಾಗೂ ಕೆನರಾ ಬ್ಯಾಂಕ್ ಖಾತೆಗಳಿಂದ ಒಟ್ಟು ₹3,03,000 ಹಣ ಕಳೆದುಕೊಂಡಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ತಕ್ಷಣ ಪ್ರಸನ್ನ ಅವರು ಸೈಬರ್ ಅಪರಾಧ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಅಲ್ಲದೆ, ತಮ್ಮ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿರುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 121/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(C), 66(D) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಅನುಮಾನಾಸ್ಪದ ಮೆಸೇಜ್ಗಳು, ಅಪರಿಚಿತ ಲಿಂಕ್ಗಳು ಹಾಗೂ ಮೊಬೈಲ್ ಅಪ್ಡೇಟ್ ಸೂಚನೆಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಸೈಬರ್ ವಂಚನೆಗೆ ಒಳಗಾದರೆ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸುವಂತೆ ಸೂಚಿಸಲಾಗಿದೆ.

