ಆನ್‌ಲೈನ್ ಚಲನ್ ಆ್ಯಪ್ ಹುಡುಕಿದ ವ್ಯಕ್ತಿಗೆ ಸೈಬರ್ ವಂಚನೆ : ಲಕ್ಷಾಂತರ ರೂಪಾಯಿ ಹಣ ಖಾತೆಯಿಂದ ಮಾಯ!

0
14

ಕೇರಳದ ಟ್ರಾಫಿಕ್ ದಂಡ ಪಾವತಿಸಲು ಆ್ಯಪ್ ಹುಡುಕಾಟ – ನಕಲಿ ಆ್ಯಪ್ ಮೂಲಕ ವಂಚನೆ ಶಂಕೆ

ಕುಂದಾಪುರ : ಕೇರಳದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಂಡ ಪಾವತಿಸಲು ಆನ್‌ಲೈನ್‌ನಲ್ಲಿ ಚಲನ್ ಆ್ಯಪ್ ಹುಡುಕಿದ ವ್ಯಕ್ತಿಯೊಬ್ಬರು ಸೈಬರ್ ವಂಚನೆಗೆ ಒಳಗಾಗಿರುವ ಘಟನೆ ವರದಿಯಾಗಿದೆ. ಜಾಕ್ಸನ್ ಡಿಸೋಜಾ ಎಂಬುವವರ ವಿವಿಧ ಬ್ಯಾಂಕ್ ಖಾತೆಗಳಿಂದ ಒಟ್ಟು ₹3,41,042.18 ಹಣವನ್ನು ಅಪರಿಚಿತರು ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜಾಕ್ಸನ್ ಡಿಸೋಜಾ ಅವರು ಕೇರಳದಲ್ಲಿ ಈ ಹಿಂದೆ ಸಂಚಾರ ನಿಯಮ ಉಲ್ಲಂಘಿಸಿದ್ದರಿಂದ ದಂಡದ ಮೊತ್ತ ಪಾವತಿಸುವ ಉದ್ದೇಶದಿಂದ ನವೆಂಬರ್ 11ರಂದು ರಾತ್ರಿ ಸುಮಾರು 9 ಗಂಟೆಗೆ ಮೊಬೈಲ್‌ನಲ್ಲಿ ಕೇರಳ ಚಲನ್ ಆ್ಯಪ್‌ಗಾಗಿ ಹುಡುಕಾಟ ನಡೆಸಿದ್ದರು. ಮರುದಿನ ನವೆಂಬರ್ 12ರಂದು ಮಧ್ಯಾಹ್ನ 3.30ರ ಸುಮಾರಿಗೆ ಅವರ ಮೊಬೈಲ್‌ನಲ್ಲಿ ‘ಸಿಸ್ಟಂ ಅಪ್‌ಡೇಟ್’ ಎಂಬ ಸಂದೇಶ ಕಾಣಿಸಿಕೊಂಡಿತ್ತು.

ಅದೇ ದಿನ ಸಂಜೆ ಸುಮಾರು 5 ಗಂಟೆಗೆ ತಮ್ಮ ಮೀನು ಸಾಗಾಟ ವಾಹನದ ಚಾಲಕನಿಗೆ ಫೋನ್‌ಪೇ ಮೂಲಕ ₹5,000 ವರ್ಗಾಯಿಸಲು ಪ್ರಯತ್ನಿಸಿದಾಗ ಖಾತೆಯಲ್ಲಿ ಹಣದ ಬ್ಯಾಲೆನ್ಸ್ ಇಲ್ಲದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಬ್ಯಾಂಕ್‌ಗೆ ತೆರಳಿ ತಮ್ಮ ಕರೆಂಟ್ ಅಕೌಂಟ್ ಹಾಗೂ ಎಸ್‌ಬಿ ಅಕೌಂಟ್‌ಗಳನ್ನು ಪರಿಶೀಲಿಸಿದಾಗ ಅಪರಿಚಿತರು ಖಾತೆಯಿಂದ ಹಣ ವರ್ಗಾಯಿಸಿರುವುದು ಬೆಳಕಿಗೆ ಬಂದಿದೆ.

ವಂಚಕರು ವಿವಿಧ ಹಂತಗಳಲ್ಲಿ ಹಲವು ಅಪರಿಚಿತ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡಿರುವುದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕರೆಂಟ್ ಅಕೌಂಟ್‌ನಿಂದ ₹98,400.18, ₹23,695, ₹25,194, ₹28,987, ₹51,430, ₹2,59,552 ಸೇರಿದಂತೆ ವಿವಿಧ ಮೊತ್ತಗಳನ್ನು ವರ್ಗಾಯಿಸಲಾಗಿತ್ತು. ಅಲ್ಲದೆ, ತಲಾ ₹75,000ರಂತೆ ಎರಡು ಬಾರಿ ಹಣ ವರ್ಗಾವಣೆ ಮಾಡಲಾಗಿತ್ತು.

ಇದರೊಂದಿಗೆ ಎಸ್‌ಬಿ ಖಾತೆಗೆ ₹500 ಜಮೆ ಮಾಡಿ ಅಲ್ಲಿಂದ ₹24,284 ವರ್ಗಾಯಿಸಲಾಗಿತ್ತು. ಕರೆಂಟ್ ಅಕೌಂಟ್‌ನಿಂದ ಎಸ್‌ಬಿ ಖಾತೆಗೆ ₹20,000 ವರ್ಗಾಯಿಸಿ, ಅಲ್ಲಿಂದಲೂ ₹75,000, ₹5,000 ಹಾಗೂ ₹10,000 ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿಕೊಳ್ಳಲಾಗಿತ್ತು. ಬಳಿಕ ಎಸ್‌ಬಿ ಖಾತೆಗೆ ₹15,000 ಜಮೆ ಮಾಡಿ ಆ ಮೊತ್ತವನ್ನೂ ಮತ್ತೊಂದು ಖಾತೆಗೆ ವರ್ಗಾಯಿಸಲಾಗಿತ್ತು.

ಈ ರೀತಿಯಾಗಿ ಒಟ್ಟು ₹3,41,042.18 ಹಣವನ್ನು ಅಪರಿಚಿತ ಸೈಬರ್ ವಂಚಕರು ವರ್ಗಾಯಿಸಿಕೊಂಡಿದ್ದಾರೆ ಎಂದು ಜಾಕ್ಸನ್ ಡಿಸೋಜಾ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 103/2026ರಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(C) ಮತ್ತು 66(D) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.