ಉಡುಪಿಯಲ್ಲಿ ಉದ್ಯಮಶೀಲತೆಗೆ ಹೊಸ ವೇದಿಕೆ: ಯುಸಿಸಿಐ ಸ್ಟಾರ್ಟ್‌ಅಪ್ 2026ಕ್ಕೆ ಚಾಲನೆ

0
3

ಉಡುಪಿ : ಉಡುಪಿ ಛೇಂಬರ್ ಆಫ್ ಕಾಮರ್ಸ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ ಕಿದಿಯೂರು ಹೋಟೆಲ್‌ನ ಮಾಧವ ಸಭಾಂಗಣದಲ್ಲಿ ಭಾನುವಾರ ನಡೆದ ಯುಸಿಸಿಐ ಸ್ಟಾರ್ಟ್‌ಅಫ್ ಆ್ಯಂಡ್ ಇಂಟರ್‌ಪ್ರೆನರ್‌ಶಿಫ್ 2026 ಉದ್ಘಾಟಿಸಿ ಮಾತನಾಡಿದರು.

ಕರಾವಳಿಯಲ್ಲಿ ಅತ್ಯುತ್ತಮ ಶೈಕ್ಷಣಿಕ ಮೂಲ ಸೌಕರ್ಯ ಇದೆ. ಉತ್ತಮ ಶಿಕ್ಷಣ ವ್ಯವಸ್ಥೆಯ ಜತೆಗೆ ಸಾಕ್ಷರತೆಯ ಪ್ರಮಾಣವೂ ಉನ್ನತ ಮಟ್ಟದಲ್ಲಿದೆ. ಇಲ್ಲಿ 25 ಕ್ಕೂ ಅಧಿಕ ಎಂಜಿನಿಯರಿಂಗ್, 10 ಕ್ಕೂ ಅಧಿಕ ವೈದ್ಯಕೀಯ ಕಾಲೇಜು ಹಾಗೂ 150 ಕ್ಕೂ ಅಧಿಕ ಪದವಿ ಕಾಲೇಜುಗಳಿವೆ. ಪ್ರತಿಭಾವಂತ ಯುವಜನರ ದೊಡ್ಡ ಸಮೂಹವೇ ನಮ್ಮಲ್ಲಿದೆ. ಈ ಎಲ್ಲಾ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಉತ್ತಮ ವೇದಿಕೆಯನ್ನು ಕಲ್ಪಿಸಬೇಕಾಗಿದೆ ಎಂದು ತಿಳಿಸಿದರು.

ಸಣ್ಣ ಪ್ರಯತ್ನಗಳ ಮೂಲಕ ದೊಡ್ಡ ಬದಲಾವಣೆ ತರುವುದಕ್ಕೆ ಸಾಧ್ಯವಿದೆ. ನನ್ನ ಅನುಭವದಲ್ಲಿ ಹೇಳುವುದಾದರೆ, ಜನರು ನಿರಂತರವಾಗಿ ತಮ್ಮ ಬೇಡಿಕೆಗಳನ್ನು ಮುಂದಿಡುತ್ತಿದ್ದರೆ ಸರಕಾರವೂ ಅದಕ್ಕೆ ಸ್ಪಂದಿಸುತ್ತದೆ.
ಈ ನಿಟ್ಟಿನಲ್ಲಿ ಉಡುಪಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (UCCI) ಇನ್ನಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.

ಪ್ರಸ್ತುತ ಕಾಲಘಟ್ಟದಲ್ಲಿ ಆನ್‌ಲೈನ್ ಉದ್ಯಮ ನಡೆಸುವವರಿಗೆ ಕ್ಲೌಡ್ ತಂತ್ರಜ್ಞಾನ ಅಥವಾ ಚಾಟ್‌ಜಿಪಿಟಿ ಅತ್ಯುತ್ತಮ ಸಂಪನ್ಮೂಲವಾಗಿದೆ. ಅವುಗಳಿಂದ ನಾವು ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು. ಸೂಕ್ತ ಪ್ರಶ್ನೆಗಳನ್ನು ಕೇಳಿದರೆ ಉಪಯುಕ್ತ ಮಾಹಿತಿಯನ್ನು ನೀಡುತ್ತದೆ. ಉದ್ಯಮಿದಾರರು ನೇರವಾಗಿ ಗ್ರಾಹಕರನ್ನು ತಲುಪಬೇಕು. ಉತ್ಪನ್ನವೊಂದನ್ನು ಮಾರುಕಟ್ಟೆಗೆ ಪರಿಚಯಿಸುವಾಗ ಆರಂಭಿಕ ಹಂತದಲ್ಲಿ ಕನಿಷ್ಠ ಮೊದಲ 1,000 ಗ್ರಾಹಕರನ್ನು ನೀವೇ ಸ್ವತಃ ಸಂಪಾದಿಸಿಕೊಳ್ಳಬೇಕು.
ಈ ಕೆಲಸವನ್ನು ಮಾಡಲು ಆರಂಭದಲ್ಲೇ ಸೇಲ್ಸ್ ಸಿಬ್ಬಂದಿಯನ್ನು ನೇಮಿಸಿಕೊಳ್ಳಬಾರದು. ಸಂಸ್ಥೆಯ ಸ್ಥಾಪಕರಿಗೆ ತಮ್ಮ ಉತ್ಪನ್ನ ಮತ್ತು ಉದ್ಯಮದ ಬಗ್ಗೆ ಇರುವಷ್ಟು ಗಂಭೀರತೆ ಸೇಲ್ಸ್ ಸಿಬ್ಬಂದಿಗೆ ಇರುವುದಿಲ್ಲ. ತಿಂಗಳ ಕೊನೆಯಲ್ಲಿ ಅವರಿಗೆ ಸಂಬಳ ಸಿಕ್ಕರೆ ಸಾಕು ಎಂಬ ಮನೋಭಾವ ಇರಬಹುದು. ಆದರೆ ಉದ್ಯಮದ ಸ್ಥಾಪಕರಿಗೆ ತಮ್ಮ ಉದ್ಯಮದ ಯಶಸ್ಸು ಮತ್ತು ಭವಿಷ್ಯದ ಬಗ್ಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ ಎಂದು ಸಲಹೆ ನೀಡಿದರು.

ಡಾ.ಎ.ಪಿ. ಆಚಾರ್ಯ ಮಾತನಾಡಿ, ಪ್ರಸ್ತುತ ಕಂಪನಿಗಳು ಕೇವಲ ಪದವೀಧರರನ್ನು ನೇಮಿಸಿಕೊಳ್ಳುವುದಕ್ಕಿಂತ ಹೊಸ ಜ್ಞಾನ ಮತ್ತು ತಂತ್ರಜ್ಞಾನವನ್ನು ಸೃಷ್ಟಿಸಬಲ್ಲ ಪ್ರತಿಭಾವಂತರನ್ನು ಹುಡುಕುತ್ತಿವೆ. ಅಂತಹ ಪರಿಶ್ರಮ, ಬದ್ಧತೆ ಮತ್ತು ಸಾಧಿಸುವ ಹಂಬಲ ನಿಮ್ಮಲ್ಲಿದ್ದರೆ ಮಾತ್ರ ಉದ್ಯಮದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಉದ್ಯಮ ಆರಂಭಿಸುವ ಆಸಕ್ತಿ, ಹೊಸತನ್ನು ಪ್ರಯತ್ನಿಸುವ ಧೈರ್ಯ ಮತ್ತು ನಿರಂತರ ಪರಿಶ್ರಮ ಇದ್ದರೆ ಉತ್ತಮ ಉದ್ಯೋಗಾವಕಾಶಗಳು ಪಡೆಯಬಹುದು. ಉದ್ಯಮದಲ್ಲಿಯೂ ಯಶಸ್ಸು ಸಾಧಿಸಬಹುದು. ಸವಾಲುಗಳನ್ನು ಎದುರಿಸುವ ಉದ್ಯಮಿಗಳಿಗೆ ಧೈರ್ಯ ಇರಬೇಕೆಂದರು.

ಸರಕಾರದ ಅನುದಾನ ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ಅರ್ಹ ಉದ್ಯಮಿಗಳು ಮುಂದೆ ಬರಬೇಕು. ಉದ್ಯಮಶೀಲತೆಯ ಸಾಮರ್ಥ್ಯವನ್ನು ಗುರುತಿಸಿ, ಈ ಪ್ರದೇಶವನ್ನು ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಆಧಾರಿತ ಸ್ಟಾರ್ಟ್‌ಅಪ್‌ಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ದೃಷ್ಟಿಕೋನದೊಂದಿಗೆ ಕೆಲಸ ಮಾಡಬೇಕು. ನಾವೆಲ್ಲರೂ ಒಗ್ಗಟ್ಟಿನಿಂದ ಪ್ರಯತ್ನಿಸಿದರೆ ನಮ್ಮ ಪ್ರದೇಶದಲ್ಲಿ ಉತ್ತಮ ಉದ್ಯಮ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಯುಸಿಸಿಐ ಅಧ್ಯಕ್ಷ ನಟರಾಜ್ ಪ್ರಭು, ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಯುಸಿಸಿಐ ಉಪಾಧ್ಯಕ್ಷ ಡಾ. ವಿಜಯೇಂದ್ರ ವಸಂತ್ ರಾವ್, ಗೌರವ ಕಾರ್ಯದರ್ಶಿ ಸಮೀರ್ ಮೊಹಮ್ಮದ್, ಜತೆ ಕಾರ್ಯದರ್ಶಿ ಅನೀಶ್ ಪೈ, ಕೋಶಾಧಿಕಾರಿ ಕೆ.‌ ವಿನೋದ್ ಪೈ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕ ಅತುಲ್ ಭಕ್ತ , ಶ್ರುತಿ  ಜಿ.‌ ಶೆಣೈ ಅವರು ಅತಿಥಿಗಳನ್ನು ಪರಿಚಯಿಸಿದರು.

ಯುಸಿಸಿಐ ಸಮೀರ್ ಮೊಹಮ್ಮದ್ ವಂದಿಸಿದರು. ಜತೆ ಕಾರ್ಯದರ್ಶಿ ಅವಿನಾಶ್ ಪೂಜಾರಿ ನಿರೂಪಿಸಿದರು.