ಪದ್ಮುಂಜ ಪೇಟೆಯಲ್ಲಿ ಹದಗೆಟ್ಟ ಫೈಬರ್ ಹಂಪ್ಸ್: ರಸ್ತೆಯಲ್ಲೇ ಬೋಲ್ಟ್‌ಗಳು, ವಾಹನ ಸವಾರರಿಗೆ ಸಂಕಷ್ಟ!

0
6

ಬೆಳ್ತಂಗಡಿ : ಬಂದಾರು–ಕುಪ್ಪೆಟ್ಟಿ ಮುಖ್ಯ ರಸ್ತೆಯ ಪದ್ಮುಂಜ ಪೇಟೆಯಲ್ಲಿ ರಸ್ತೆ ಸುರಕ್ಷತೆಗಾಗಿ ಅಳವಡಿಸಲಾಗಿರುವ ಫೈಬರ್ ಹಂಪ್ಸ್‌ಗಳು ಹದಗೆಟ್ಟು ವಾಹನ ಸವಾರರಿಗೆ ತೊಂದರೆ ಉಂಟುಮಾಡುತ್ತಿವೆ.

ಪದ್ಮುಂಜ ಪೇಟೆಯ ರಸ್ತೆಯ ಎರಡೂ ಕಡೆ ಅಳವಡಿಸಲಾಗಿದ್ದ ಫೈಬರ್ ಹಂಪ್ಸ್‌ಗಳು ಮುರಿದು ಹಾಳಾಗಿದ್ದು, ಅವುಗಳನ್ನು ಅಳವಡಿಸಲು ಬಳಸಲಾಗಿದ್ದ ಆಂಕರ್ ಬೋಲ್ಟ್‌ಗಳು ರಸ್ತೆಯಲ್ಲೇ ಉಳಿದುಕೊಂಡಿವೆ. ಇದರಿಂದ ಸಂಚರಿಸುವ ವಾಹನಗಳ ಟಯರ್‌ಗಳು ಪಂಕ್ಚರ್ ಆಗುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ.

ಈ ಅವ್ಯವಸ್ಥೆಯಿಂದ ದ್ವಿಚಕ್ರ ಹಾಗೂ ಇತರ ವಾಹನ ಸವಾರರು ಮಾತ್ರವಲ್ಲದೆ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಪಾದಚಾರಿಗಳೂ ತೊಂದರೆ ಅನುಭವಿಸುವಂತಾಗಿದೆ. ರಸ್ತೆಯಲ್ಲಿರುವ ಬೋಲ್ಟ್‌ಗಳು ವಾಹನಗಳ ಟಯರ್‌ಗಳಿಗೆ ಹಾನಿ ಉಂಟುಮಾಡುವುದರ ಜೊತೆಗೆ ಅಪಘಾತದ ಭೀತಿಯನ್ನೂ ಸೃಷ್ಟಿಸಿವೆ.

ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಹಾಳಾಗಿರುವ ಫೈಬರ್ ಹಂಪ್ಸ್‌ಗಳನ್ನು ತೆರವುಗೊಳಿಸಿ ಅಥವಾ ದುರಸ್ತಿಪಡಿಸಿ, ರಸ್ತೆಯಲ್ಲಿರುವ ಬೋಲ್ಟ್‌ಗಳನ್ನು ತೆರವುಗೊಳಿಸುವ ಮೂಲಕ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯ ನಾಗರಿಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.