ಡಿ.13ರಿಂದ ಹಿರ್ಗಾನ ನೆಲ್ಲಿಕಟ್ಟೆ ಶ್ರೀ ದತ್ತ ಮಂದಿರದಲ್ಲಿ 25ನೇ ವರ್ಷದ ದತ್ತಮಾಲಾ ಧಾರಣೆ

0
10

ಕಾರ್ಕಳ : ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆಯ ಶ್ರೀ ದತ್ತ ಮಂದಿರದಲ್ಲಿ ಪ್ರತಿಷ್ಠಾ ಮಹೋತ್ಸವ ಹಾಗೂ ಶ್ರೀ ದತ್ತ ಜಯಂತಿಯ ಪ್ರಯುಕ್ತ 25ನೇ ವರ್ಷದ ಶ್ರೀ ದತ್ತ ಮಾಲಾ ಧಾರಣೆ ಕಾರ್ಯಕ್ರಮ ಡಿಸೆಂಬರ್ 13ರಿಂದ ಆರಂಭಗೊಳ್ಳಲಿದೆ.

ಡಿ.13ರಂದು ಭಕ್ತರು ದತ್ತಮಾಲಾ ಧಾರಣೆ ಮಾಡಲಿದ್ದು, ಡಿಸೆಂಬರ್ 20ರಂದು ಸಂಜೆ 6 ಗಂಟೆಯಿಂದ ಮಹಾಪೂಜೆ ನಡೆಯಲಿದೆ. ಸಂಜೆ 6.30ಕ್ಕೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ, ಬಜ್ಪೆ ಇವರಿಂದ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.

ಶ್ರೀ ಸುಬ್ಬು ಸಾಂಟ್ಯಾರು ವಿರಚಿತ ಕೋಟಿ ಚೆನ್ನಯ್ಯರ ಕಾರ್ಣಿಕದ ಎರಡನೇ ಭಾಗವಾದ ‘ಅಮರ್ ಬೀರೆರ್’ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಅದೇ ದಿನ ಸಂಜೆ 7 ಗಂಟೆಯಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಡಿ.22ರಂದು ರಾತ್ರಿ 8 ಗಂಟೆಗೆ ದತ್ತ ಮಾಲಾಧಾರಿಗಳು ಶ್ರೀ ದತ್ತಪೀಠಕ್ಕೆ ಪ್ರಯಾಣ ಬೆಳೆಸಲಿದ್ದು, ಡಿ.23ರಂದು ಶ್ರೀ ದತ್ತಪೀಠದಲ್ಲಿ ಶ್ರೀ ದತ್ತಾತ್ರೇಯ ದೇವರ ದರ್ಶನ ಪಡೆಯಲಿದ್ದಾರೆ.

25ನೇ ವರ್ಷದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದತ್ತಮಾಲಾಧಾರಿಗಳಾಗಿ ಶ್ರೀ ದತ್ತಪೀಠದ ಯಾತ್ರೆಯಲ್ಲಿ ಪಾಲ್ಗೊಂಡು ಶ್ರೀ ದತ್ತಾತ್ರೇಯ ದೇವರ ಕೃಪೆಗೆ ಪಾತ್ರರಾಗುವಂತೆ ಮಂದಿರದ ವತಿಯಿಂದ ಆಹ್ವಾನಿಸಲಾಗಿದೆ.