ಮಕ್ಕಳ ದ್ರಷ್ಟಿ ಪರಿಶೀಲನೆ

0
8

ಲಯನ್ಸ್ ಇಂಟರ್‌ನ್ಯಾಷನಲ್‌ನ ಜಾಗತಿಕ ಸೇವಾ ಕಾರ್ಯಕ್ರಮವಾದ “Sight for Kids” ಯೋಜನೆಯಡಿ ಲಯನ್ಸ್ ಕ್ಲಬ್ ಆಫ್ ಮಂಗಳೂರು ಸೋಮೇಶ್ವರದ ವತಿಯಿಂದ ಕುಂಪಲದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗಾಗಿ ಉಚಿತ ದೃಷ್ಟಿ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.

ಶಾಲಾ ಮಕ್ಕಳಲ್ಲಿ ನೇತ್ರ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು, ದೃಷ್ಟಿ ದೋಷಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಒದಗಿಸುವುದು ಹಾಗೂ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

ಶಾಲೆಯ ಮುಖ್ಯೋಪಾಧ್ಯಾಯಿನಿ ಚಂದ್ರಕಲಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಸೋಮೇಶ್ವರದ ಅಧ್ಯಕ್ಷರಾದ ಲಯನ್ ವಿಜಯನ್ ಕೆ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಕ್ಕಳಿಗೆ ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸುವ ಮಹತ್ವದ ಕುರಿತು ಮಾತನಾಡಿದರು.

ತಪಾಸಣೆಯ ಸಂದರ್ಭದಲ್ಲಿ ದೃಷ್ಟಿ ದೋಷ ಕಂಡುಬರುವ ಅರ್ಹ ಮಕ್ಕಳಿಗೆ ಮುಂದಿನ ಹಂತದಲ್ಲಿ ಉಚಿತ ಕನ್ನಡಕಗಳನ್ನು ವಿತರಿಸಲಾಗುವುದು. ಆರ್ಥಿಕ ತೊಂದರೆಯಿಂದ ಯಾವುದೇ ಮಗುವಿಗೆ ಸೂಕ್ತ ನೇತ್ರ ಆರೈಕೆ ವಂಚಿತವಾಗಬಾರದು ಎಂಬ ಆಶಯದೊಂದಿಗೆ ಈ ಸೇವಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.

ಲಯನ್ ಶಶಿಕುಮಾರ್ ನಾಯರ್ ಸ್ವಾಗತಿಸಿದರು. ಲಯನ್ ಫ್ಲಾವಿಯಾ ಡಿಸೋಜಾ ವಂದಿಸಿದರು.

ಮಕ್ಕಳ ನೇತ್ರ ಆರೋಗ್ಯ ಮತ್ತು ದೃಷ್ಟಿ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡುವ ಮೂಲಕ ಲಯನ್ಸ್ ಇಂಟರ್‌ನ್ಯಾಷನಲ್‌ನ ಜಾಗತಿಕ ಸೇವಾ ಉದ್ದೇಶಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಸೋಮೇಶ್ವರದ ಈ ಸೇವಾ ಕಾರ್ಯವು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.