ಗುರುತತ್ವದ ಅರಿವಿನೊಂದಿಗೆ ಆತ್ಮಾವಲೋಕನದ ಅಗತ್ಯ : ರೇಣುಕಾ ಕಣಿಯೂರು

0
6

ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಗುರುತತ್ವವಾಹಿನಿ ಮಾಲಿಕೆ 88

ಅಗಲ್ದೋಡಿ ಇರ್ವತ್ತೂರು : ಶಿಕ್ಷಣ, ಧರ್ಮ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಎಲ್ಲರಿಗೂ ಸಮಾನ ಹಕ್ಕು ದೊರೆಯಬೇಕೆಂದು ಪ್ರತಿಪಾದಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಗುರುಗಳ ತತ್ವ, ಆದರ್ಶ ಮತ್ತು ಸಂದೇಶಗಳನ್ನು ನಮ್ಮ ಬದುಕಿನಲ್ಲಿ ಎಷ್ಟರಮಟ್ಟಿಗೆ ಅನುಷ್ಠಾನಗೊಳಿಸಿದ್ದೇವೆ ಎಂಬ ಬಗ್ಗೆ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಬರಹಗಾರ್ತಿ ಹಾಗೂ ನಿರೂಪಕಿ ರೇಣುಕಾ ಕಣಿಯೂರು ತಿಳಿಸಿದರು.

ಅವರು ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ನವೆಂಬರ್ 22ರಂದು ಇರ್ವತ್ತೂರು ಅಗಲ್ದೋಡಿಯ ಶೇಖರ ಪೂಜಾರಿಯವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 88ರಲ್ಲಿ ಗುರುಸಂದೇಶ ನೀಡಿದರು.

ಗುರುಗಳ ಜಯಂತಿ ಆಚರಣೆ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಭಾಷಣಗಳಿಗೆ ಮಾತ್ರ ನಮ್ಮ ಗೌರವ ಸೀಮಿತವಾಗಬಾರದು. ಅವರ ಸಮಾನತೆ, ಸಹೋದರತೆ, ಶಿಕ್ಷಣ ಮತ್ತು ಮಾನವೀಯತೆಯ ಚಿಂತನೆಗಳು ನಮ್ಮ ನಡೆ-ನುಡಿಗಳಲ್ಲಿ ಪ್ರತಿಬಿಂಬಿಸಬೇಕು. ಗುರುಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅಭಿಪ್ರಾಯಪಟ್ಟರು.

ಭಜನಾ ಸಂಕೀರ್ತನೆಯಲ್ಲಿ ಸಾತ್ವಿಕ್ ದೇರಾಜೆ , ಕಾರ್ತಿಕ್ ದೇರಾಜೆ ಸಂಗೀತ ಸೇವೆ ನೀಡಿದರು. ಆತಿಥ್ಯ ವಹಿಸಿದ ಶೇಖರ್ ಪೂಜಾರಿ ಅಗಲ್ದೋಡಿ ಇವರು ಆಗಮಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಯುವವಾಹಿನಿ ಬಂಟ್ವಾಳ ಘಟಕದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಮಾಜಿ ಅಧ್ಯಕ್ಷರು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು

ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಮಹೇಶ್ ಬೊಳ್ಳಾಯಿ ವಂದಿಸಿದರು. ಅಧ್ಯಕ್ಷ ಕಿರಣ್‌ರಾಜ್ ಪೂಂಜರೆಕೋಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.