ಸಂಗೀತ ಕ್ಷೇತ್ರದ ಸಾಧನೆಗೆ ತಾಯಿಯೇ ಸ್ಫೂರ್ತಿ: ಡಾ. ಪ್ರಶಾಂತ್

0
7

90 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಕೊರೋಕೆ ಸಂಗೀತ ಸ್ಪರ್ಧೆಯು ವಿದ್ಯಾದಾಯಿನೀ ವಿರಾಟ್ ಹಾಲ್‌ನಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರು ರಾಘವೇಂದ್ರ ಹೆಚ್ ವಿ ಮಾತನಾಡಿ, ಸಂಗೀತವು ನೊಂದ ಮನಸ್ಸಿಗೆ ಅತ್ಯುತ್ತಮ ಔಷಧಿಯಾಗಿದ್ದು, ಮನಸ್ಸಿನ ಪ್ರಶಾಂತತೆ ಮತ್ತು ನೆಮ್ಮದಿಗೆ ಸಂಗೀತ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

ಗೌರವ ಉಪಸ್ಥಿತರಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಉಡುಪಿಯ ವೈದ್ಯರು ಹಾಗೂ ಈ ಟಿ.ವಿ.ಯ ಜನಪ್ರಿಯ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋನ ಪ್ರಶಸ್ತಿ ವಿಜೇತರಾದ ಡಾ. ಪ್ರಶಾಂತ್ ಕೆ. ಅವರು ಮಾತನಾಡಿ, ಸಂಗೀತ ಕ್ಷೇತ್ರದಲ್ಲಿನ ತಮ್ಮ ಸಾಧನೆಗೆ ತಾಯಿಯೇ ಮುಖ್ಯ ಸ್ಫೂರ್ತಿ. ಸಮಾಜದ ಅನೇಕ ಹಿರಿಯರು ಹಾಗೂ ಕಿರಿಯರ ಸಹಕಾರ, ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದು ತಮ್ಮ ಅನುಭವ ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಜೀ ಕನ್ನಡ ವಾಹಿನಿಯ ಸರಿಗಮಪ ಲಿಟಲ್ ಚಾಂಪ್ಸ್ 2026ರ ಪ್ರಥಮ ಪ್ರಶಸ್ತಿ ವಿಜೇತ ಮಾಸ್ಟರ್ ಅಶ್ಮಿತ್ ಅವರನ್ನು ಗುರುತಿಸಿ ಅಭಿನಂದಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಹಿಂದೂ ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಶ್ರೀರಂಗ ಎಚ್., ಶ್ರೀ ಮಾತಾ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ರಮಾ ವೆಂಕಟ್ರಾವ್, ವಿರಾಟ್‌ನ ಕಾರ್ಯದರ್ಶಿ ಗಿರೀಶ್ ಪಿ.ವಿ., ಶ್ರೀಕಾಂತ್ ಟಿ., ಮೃದುಲಾ, ಮುರಾರಿ ರಾವ್ ಹೊಸಬೆಟ್ಟು, ಸಮರ್ಥ ಶೆಣೈ, ನವಗಿರಿ ಗಣೇಶ್, ಸಂಘದ ಕಾರ್ಯದರ್ಶಿ ಶ್ರೀನಿವಾಸ ಕುಳಾಯಿ ಹಾಗೂ ಕೋಶಾಧಿಕಾರಿ ದಿವಸ್ಪತಿ ಉಪಸ್ಥಿತರಿದ್ದರು.

ರಾಕೇಶ್ ಹೊಸಬೆಟ್ಟು ಮತ್ತು ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆಯ ಉಪಪ್ರಾಂಶುಪಾಲೆ ಅಶ್ವಿನಿ ಐತಾಳ್ ಕಾರ್ಯಕ್ರಮ ನಿರೂಪಿಸಿದರು.