ವಿಠೋಬಾ ರುಕುಮಾಯಿ ದೇವಸ್ಥಾನ ಹಾಗೂ ಭಜನಾ ಮಂದಿರದ ಕಾರ್ಯದರ್ಶಿಯಾಗಿ ಸುದೀರ್ಘ 40 ವರ್ಷಗಳ ಸೇವೆ ಸಲ್ಲಿಸಿದ ರಮೇಶ್ ಭಟ್ ಪರಾಡ್ಕರ್ ನಿವೃತ್ತಿ
-ಮಂದಾರ ರಾಜೇಶ್ ಭಟ್
ವಿಠೋಬಾ ರುಕುಮಾಯಿ ದೇವಸ್ಥಾನ ಹಾಗೂ ಭಜನಾ ಮಂದಿರದಲ್ಲಿ ಸತತ ಸುಮಾರು 40 ವರ್ಷಗಳ ಕಾಲ ಕಾರ್ಯದರ್ಶಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಪ್ರತಿಷ್ಠಿತ ಏರ್ಪಲೆ ಮನೆತನದ ರಮೇಶ್ ಭಟ್ ಪರಾಡ್ಕರ್ ಅವರು ತಮ್ಮ ಸುದೀರ್ಘ ಸೇವೆಯಿಂದ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಗೌರವಾಭಿನಂದನೆ ಸಲ್ಲಿಸಲಾಯಿತು.

ದೇವಸ್ಥಾನ ಮತ್ತು ಭಜನಾ ಮಂದಿರದ ಸುಮಾರು 80 ವರ್ಷಗಳ ಇತಿಹಾಸದಲ್ಲಿ ಅರ್ಧದಷ್ಟು ಅವಧಿಯನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಸೇವೆಗೆ ಮೀಸಲಿಟ್ಟ ಅವರ ಕೊಡುಗೆ ಸ್ಮರಣೀಯವಾಗಿದೆ.
ಈ ಸಂದರ್ಭದಲ್ಲಿ ವಿಠೋಬಾ ರುಕುಮಾಯಿ ದೇವಸ್ಥಾನದ ಆಡಳಿತ ಮಂಡಳಿ, ಕರಾಡ ಬ್ರಾಹ್ಮಣ ಸುಧಾರಕ ಸಂಘ ಸೇರಿದಂತೆ ವಿವಿಧ ಸಮಾಜ ಸಂಘಟನೆಗಳ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಜನಾ ಮಂಡಳಿಯ ಸದಸ್ಯರು, ಸಮಾಜ ಬಾಂಧವರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದು, ಅವರ ಸೇವೆಯನ್ನು ಶ್ಲಾಘಿಸಿದರು.

