-ಮಂದಾರ ರಾಜೇಶ್
ಬೆಂಗಳೂರು, ಕಾಡುಗೋಡಿಯ ಜನನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪದ್ಮಾವತಿ ಕೆ.ವಿ. ಅವರಿಗೆ ಕೆ.ಆರ್. ಪುರಂನ ಗಾರ್ಡನ್ ಸಿಟಿ ವಿಶ್ವವಿದ್ಯಾಲಯದಲ್ಲಿ ನಡೆದ ಶೈಕ್ಷಣಿಕ ಸಮಾವೇಶದಲ್ಲಿ ಪ್ರತಿಷ್ಠಿತ ‘ಟೀಚರ್ಸ್ ಟ್ರೋವ್–2026’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅವರ ಹಳೆಯ ವಿದ್ಯಾರ್ಥಿಯೊಬ್ಬರು ತಮ್ಮ ಗುರುಗಳ ಮಾರ್ಗದರ್ಶನವನ್ನು ಸ್ಮರಿಸಿ ನಾಮನಿರ್ದೇಶನ ಮಾಡಿದ್ದರು ಎಂಬುದು ಈ ಗೌರವದ ವಿಶೇಷ.
ಕುಲಾಧಿಪತಿ ಡಾ. ಜೋಸೆಫ್ ವಿ.ಜಿ. ಅವರ ಪರಿಕಲ್ಪನೆಯಲ್ಲಿ 17 ವರ್ಷಗಳ ಹಿಂದೆ ಆರಂಭವಾದ ಈ ವಾರ್ಷಿಕ ಸಮಾವೇಶದಲ್ಲಿ, ಕರ್ನಾಟಕ ಹಾಗೂ ಹೊರರಾಜ್ಯಗಳ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ಪಾಲ್ಗೊಂಡು ಆಧುನಿಕ ಬೋಧನಾ ವಿಧಾನಗಳ ಕುರಿತು ವಿಚಾರ ವಿನಿಮಯ ನಡೆಸಿದರು.

