ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆಯಿಂದ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ : ಡಿ. 8ರಿಂದ 31 ದಿನಗಳ ಶಿಬಿರ

0
5

ಉಚಿತ ವಸತಿ, ಸಮವಸ್ತ್ರ ಹಾಗೂ ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ

ಬ್ರಹ್ಮಾವರ: ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವ ಜೊತೆಗೆ ಸ್ವಂತ ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ಬ್ರಹ್ಮಾವರದ ರುಡ್‌ಸೆಟ್ ಸಂಸ್ಥೆ (ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ) ವತಿಯಿಂದ 31 ದಿನಗಳ ಉಚಿತ ಮಹಿಳಾ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ತರಬೇತಿಯು 2026ರ ಡಿಸೆಂಬರ್ 8ರಿಂದ ಆರಂಭಗೊಂಡು 2027ರ ಜನವರಿ 8ರವರೆಗೆ ನಡೆಯಲಿದೆ. ತರಬೇತಿ ಅವಧಿಯಲ್ಲಿ ಪೆಟಿಕೋಟ್, ಶರ್ಟ್, ನೈಟಿ, ವಿವಿಧ ವಿನ್ಯಾಸದ ಬ್ಲೌಸ್‌ಗಳು ಹಾಗೂ ಗೌನ್ ಸೇರಿದಂತೆ ಹಲವು ಬಗೆಯ ಉಡುಪುಗಳ ಹೊಲಿಗೆಯನ್ನು ಪ್ರಾಯೋಗಿಕವಾಗಿ ಕಲಿಸಿಕೊಡಲಾಗುತ್ತದೆ. ಇದರೊಂದಿಗೆ ಹೊಲಿಗೆ ಯಂತ್ರದ ಬಳಕೆ ಮತ್ತು ನಿರ್ವಹಣೆಯ ಬಗ್ಗೆಯೂ ತರಬೇತಿ ನೀಡಲಾಗುತ್ತದೆ.

18ರಿಂದ 50 ವರ್ಷ ವಯಸ್ಸಿನ ಅಭ್ಯರ್ಥಿಗಳು ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಅಭ್ಯರ್ಥಿಗಳಿಗೆ ಉಚಿತ ವಸತಿ ಮತ್ತು ಸಮವಸ್ತ್ರದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ ನೀಡಲಾಗುತ್ತದೆ.

ಹೊಲಿಗೆ ಕಲೆಯ ಮೂಲಕ ಸ್ವಂತ ಉದ್ಯೋಗ ಆರಂಭಿಸಲು ಆಸಕ್ತಿ ಹೊಂದಿರುವ ಮಹಿಳೆಯರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆ ತಿಳಿಸಿದೆ.

ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ 7022560492 ಅಥವಾ 9844086383 ಸಂಖ್ಯೆಯನ್ನು ಸಂಪರ್ಕಿಸಬಹುದು.

ವಿಳಾಸ: ರುಡ್‌ಸೆಟ್ ಸಂಸ್ಥೆ, 52ನೇ ಹೆದ್ದಾರಿ, ಬ್ರಹ್ಮಾವರ – 576213, ಉಡುಪಿ ಜಿಲ್ಲೆ.