ಹಲ್ಲುಜ್ಜುವುದಷ್ಟೇ ಸಾಕಾಗದು, ಪ್ರತಿದಿನ ದಂತಬಳ್ಳಿಯ ಬಳಕೆಯೂ ಅಗತ್ಯ

0
12

ನವೆಂಬರ್ 27 – ವಿಶ್ವ ದಂತಬಳ್ಳಿ ಬಳಕೆ ದಿನ

ಸುಂದರವಾದ ನಗು ಹಾಗೂ ಆರೋಗ್ಯಕರ ಹಲ್ಲುಗಳನ್ನು ಹೊಂದಲು ಕೇವಲ ಹಲ್ಲುಜ್ಜುವುದಷ್ಟೇ ಸಾಕಾಗುವುದಿಲ್ಲ. ಹಲ್ಲುಗಳ ನಡುವಿನ ಸಂಧಿಗಳಲ್ಲಿ ಸಿಲುಕಿರುವ ಆಹಾರದ ಕಣಗಳು ಮತ್ತು ದಂತಪಾಚಿಯನ್ನು ಸ್ವಚ್ಛಗೊಳಿಸಲು ಪ್ರತಿದಿನ ದಂತಬಳ್ಳಿ (Dental Floss) ಬಳಸುವುದು ಅತ್ಯಂತ ಅಗತ್ಯವಾಗಿದೆ ಎಂದು ದಂತ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಬಾಯಿಯು ನಮ್ಮ ಜೀರ್ಣಾಂಗ ವ್ಯವಸ್ಥೆಯ ಹೆಬ್ಬಾಗಿಲು. ನಾವು ಸೇವಿಸುವ ಆಹಾರ ಬಾಯಿಯ ಮೂಲಕವೇ ದೇಹವನ್ನು ಪ್ರವೇಶಿಸುತ್ತದೆ. ಹೀಗಾಗಿ ಬಾಯಿಯ ಆರೋಗ್ಯ ಉತ್ತಮವಾಗಿದ್ದರೆ ಒಟ್ಟಾರೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಬಾಯಿಯ ಶುಚಿತ್ವ ಮತ್ತು ದಂತಾರೋಗ್ಯದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ನವೆಂಬರ್ ತಿಂಗಳ ನಾಲ್ಕನೇ ಶುಕ್ರವಾರವನ್ನು ವಿಶ್ವ ದಂತಬಳ್ಳಿ ಬಳಕೆ ದಿನವನ್ನಾಗಿ ಆಚರಿಸಲಾಗುತ್ತದೆ.

ದಂತಬಳ್ಳಿಯ ಬಳಕೆಯನ್ನು ಜನಪ್ರಿಯಗೊಳಿಸುವುದು, ಅದರ ಸರಿಯಾದ ವಿಧಾನವನ್ನು ತಿಳಿಸುವುದು ಹಾಗೂ ದಂತಕ್ಷಯ ಮತ್ತು ವಸಡಿನ ಕಾಯಿಲೆಗಳನ್ನು ತಡೆಗಟ್ಟುವ ಬಗ್ಗೆ ಅರಿವು ಮೂಡಿಸುವುದು ಈ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ.

ದಂತಬಳ್ಳಿ ಬಳಕೆ ಯಾಕೆ ಅಗತ್ಯ?

ನಾವು ಆಹಾರ ಸೇವಿಸಿದಾಗ ಅದರ ಸಣ್ಣ ಕಣಗಳು ಹಲ್ಲುಗಳ ನಡುವಿನ ಸಂಧಿಗಳಲ್ಲಿ ಸಿಲುಕಿಕೊಳ್ಳುತ್ತವೆ. ಸಾಮಾನ್ಯವಾಗಿ ಹಲ್ಲುಜ್ಜುವ ಮೂಲಕ ಈ ಕಣಗಳನ್ನು ಸಂಪೂರ್ಣವಾಗಿ ತೆಗೆಯಲು ಸಾಧ್ಯವಾಗುವುದಿಲ್ಲ. ಹಲ್ಲುಗಳ ನಡುವಿನ ಜಾಗವನ್ನು ದಂತಕುಂಚದ ಎಳೆಗಳು ತಲುಪುವುದು ಕಷ್ಟ. ಹೀಗೆ ಉಳಿದ ಆಹಾರದ ಕಣಗಳು ಬಾಯಿಯಲ್ಲಿರುವ ಸೂಕ್ಷ್ಮಜೀವಿಗಳೊಂದಿಗೆ ಸೇರಿ ಆಮ್ಲ ಉತ್ಪತ್ತಿಗೆ ಕಾರಣವಾಗುತ್ತವೆ. ಇದರಿಂದ ಹಲ್ಲುಗಳ ಸವೆತ, ದಂತಕ್ಷಯ ಹಾಗೂ ವಸಡಿನ ಕಾಯಿಲೆಗಳು ಉಂಟಾಗುವ ಸಾಧ್ಯತೆಯಿದೆ.

ಈ ಸಮಸ್ಯೆಗಳನ್ನು ತಡೆಗಟ್ಟಲು ಹಲ್ಲುಜ್ಜುವುದರ ಜೊತೆಗೆ ದಂತಬಳ್ಳಿಯ ಬಳಕೆಯೂ ಮುಖ್ಯವಾಗಿದೆ. ದಿನಕ್ಕೊಮ್ಮೆ ದಂತಬಳ್ಳಿ ಬಳಸಿ ಹಲ್ಲುಗಳ ನಡುವಿನ ಆಹಾರದ ಕಣಗಳು ಮತ್ತು ದಂತಪಾಚಿಯನ್ನು ತೆಗೆದುಹಾಕಬಹುದು.

ದಂತಬಳ್ಳಿಯಲ್ಲಿ ಎರಡು ವಿಧ

  1. ಮೇಣರಹಿತ ದಂತಬಳ್ಳಿ (Waxed Dental Floss)
  2. ಮೇಣಭರಿತ ದಂತಬಳ್ಳಿ (Unwaxed Dental Floss)

ಹಲ್ಲುಗಳ ನಡುವಿನ ಅಂತರ ಹಾಗೂ ವೈಯಕ್ತಿಕ ಅನುಕೂಲಕ್ಕೆ ಅನುಗುಣವಾಗಿ ದಂತಬಳ್ಳಿಯನ್ನು ಆಯ್ಕೆ ಮಾಡಬಹುದು. ಮೇಣಭರಿತ ದಂತಬಳ್ಳಿ ಹಲ್ಲುಗಳ ನಡುವಿನ ಬಿಗಿಯಾದ ಸಂಧಿಗಳಲ್ಲಿ ಸುಲಭವಾಗಿ ಚಲಿಸಲು ಸಹಕಾರಿಯಾಗಿದೆ. ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳ ದಂತಬಳ್ಳಿಗಳು ಹಾಗೂ ಬಳಸಲು ಸುಲಭವಾದ ದಂತಬಳ್ಳಿ ಹಿಡಿಕೆಗಳು ಲಭ್ಯವಿವೆ.

ದಂತಬಳ್ಳಿ ಬಳಸುವ ಸರಿಯಾದ ವಿಧಾನ

  • ಸುಮಾರು 15ರಿಂದ 18 ಇಂಚು ಉದ್ದದ ದಂತಬಳ್ಳಿಯನ್ನು ತೆಗೆದುಕೊಳ್ಳಬೇಕು.
  • ಎರಡೂ ಕೈಗಳ ಮಧ್ಯದ ಬೆರಳುಗಳಿಗೆ ಬಳ್ಳಿಯನ್ನು ಸುತ್ತಿ, ನಡುವೆ 2ರಿಂದ 3 ಇಂಚು ಬಳ್ಳಿಯನ್ನು ಬಿಡಬೇಕು.
  • ಹೆಬ್ಬೆರಳು ಮತ್ತು ತೋರುಬೆರಳುಗಳ ಸಹಾಯದಿಂದ ಹಲ್ಲುಗಳ ನಡುವಿನ ಸಂಧಿಗೆ ನಿಧಾನವಾಗಿ ಸೇರಿಸಬೇಕು.
  • ಹಲ್ಲಿನ ಪಕ್ಕದ ಮೇಲ್ಮೈಗೆ ಹೊಂದಿಸಿಕೊಂಡು ನಿಧಾನವಾಗಿ ಮೇಲೆ ಮತ್ತು ಕೆಳಗೆ ಚಲಿಸಬೇಕು.
  • ವಸಡಿಗೆ ಹಾನಿಯಾಗದಂತೆ ಮೃದುವಾಗಿ ಬಳಸಬೇಕು.
  • ಪ್ರತಿಯೊಂದು ಹಲ್ಲಿನ ಸಂಧಿಯನ್ನು ಸ್ವಚ್ಛಗೊಳಿಸಲು ಬಳ್ಳಿಯ ಸ್ವಚ್ಛ ಭಾಗವನ್ನು ಬಳಸಬೇಕು.
  • ಎಲ್ಲಾ ಹಲ್ಲುಗಳ ನಡುವಿನ ಸಂಧಿಗಳ ಜೊತೆಗೆ ಕೊನೆಯ ಹಲ್ಲಿನ ಹಿಂಭಾಗವನ್ನೂ ಸ್ವಚ್ಛಗೊಳಿಸಬೇಕು.
  • ಒಮ್ಮೆ ಬಳಸಿದ ಬಳ್ಳಿಯನ್ನು ಮತ್ತೊಂದು ಸಂಧಿಗೆ ಮರುಬಳಕೆ ಮಾಡಬಾರದು.

ದಂತಬಳ್ಳಿಯನ್ನು ಬಳಸುವ ಸರಿಯಾದ ವಿಧಾನವನ್ನು ದಂತವೈದ್ಯರಿಂದ ಕಲಿತುಕೊಳ್ಳುವುದು ಉತ್ತಮ.

ದಂತಬಳ್ಳಿ ಬಳಸುವಾಗ ಎಚ್ಚರಿಕೆ ಅಗತ್ಯ

ಮೊದಲ ಬಾರಿಗೆ ದಂತಬಳ್ಳಿ ಬಳಸುವಾಗ ಕೆಲವರಿಗೆ ವಸಡಿನಲ್ಲಿ ಸ್ವಲ್ಪ ರಕ್ತಸ್ರಾವ ಅಥವಾ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು. ಆದರೆ ಬಲವಂತವಾಗಿ ಬಳ್ಳಿಯನ್ನು ಎಳೆಯಬಾರದು. ನಿರಂತರವಾಗಿ ರಕ್ತಸ್ರಾವ ಅಥವಾ ನೋವು ಕಂಡುಬಂದಲ್ಲಿ ದಂತವೈದ್ಯರನ್ನು ಸಂಪರ್ಕಿಸಬೇಕು. ದಂತಬಳ್ಳಿಯನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ಹಲ್ಲುಗಳ ನಡುವಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಹಾಗೂ ವಸಡಿನ ಆರೋಗ್ಯವನ್ನು ಉತ್ತಮಗೊಳಿಸಲು ಸಾಧ್ಯ.

ಹಲ್ಲುಜ್ಜುವುದು, ಬಾಯಿ ಮುಕ್ಕಳಿಸುವುದು ಮತ್ತು ದಂತಬಳ್ಳಿಯ ಬಳಕೆ ಇವುಗಳನ್ನು ದೈನಂದಿನ ಜೀವನದ ಭಾಗವನ್ನಾಗಿಸಿಕೊಳ್ಳಬೇಕು. ಸುಂದರವಾದ ನಗು, ಸದೃಢವಾದ ಹಲ್ಲುಗಳು ಹಾಗೂ ಆರೋಗ್ಯಕರ ವಸಡುಗಳನ್ನು ಕಾಪಾಡಿಕೊಳ್ಳಲು ಪ್ರತಿದಿನ ದಂತಬಳ್ಳಿಯ ಬಳಕೆಯ ಅಭ್ಯಾಸ ಬೆಳೆಸಿಕೊಳ್ಳುವುದು ಅತ್ಯಂತ ಉತ್ತಮ ಎಂದು ದಂತವೈದ್ಯರು ಸಲಹೆ ನೀಡುತ್ತಾರೆ.

ಲೇಖನ: ಡಾ. ಮುರಲೀ ಮೋಹನ್ ಚೂಂತಾರು