ವಿಶ್ವನಾಥ ಕೆ. ಪೂಜಾರಿಗೆ 2026-27ನೇ ಸಾಲಿನ ‘ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ’ ಗೌರವ

0
10

ಉಡುಪಿ : ಗರೋಡಿಗಳಲ್ಲಿ ಬೈದೇರುಗಳ ಆರಾಧನೆ ಹಾಗೂ ಸೇವಾ ಕೈಂಕರ್ಯಗಳಲ್ಲಿ ದೀರ್ಘಕಾಲದಿಂದ ನಿಷ್ಠೆ, ಭಕ್ತಿ ಮತ್ತು ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಹಿರಿಯರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ನೀಡಲಾಗುವ 2026-27ನೇ ಸಾಲಿನ ಪ್ರತಿಷ್ಠಿತ ‘ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ’ಗೆ ಕಳತ್ತೂರು ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ವಿಶ್ವನಾಥ ಕೆ. ಪೂಜಾರಿ ಅವರು ಆಯ್ಕೆಯಾಗಿದ್ದಾರೆ.

ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.), ಆದಿಉಡುಪಿ ಸಂಸ್ಥೆಯು ಪ್ರತಿವರ್ಷ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದ್ದು, ಧಾರ್ಮಿಕ ಆರಾಧನೆ ಮತ್ತು ಸೇವಾ ಕ್ಷೇತ್ರದಲ್ಲಿ ಸಲ್ಲಿಸಿರುವ ದೀರ್ಘಕಾಲದ ಸೇವೆಯನ್ನು ಪರಿಗಣಿಸಿ ವಿಶ್ವನಾಥ ಕೆ. ಪೂಜಾರಿ ಅವರನ್ನು ಈ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ 20ರಂದು ಭಾನುವಾರ ಸಂಜೆ 3 ಗಂಟೆಗೆ ಆದಿಉಡುಪಿಯ ಸಂಸ್ಥೆಯ ‘ಬೈದಶ್ರೀ ಸಭಾಂಗಣ’ದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ವಿಶ್ವನಾಥ ಕೆ. ಪೂಜಾರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಸೂರ್ಯೋದಯ್ ಪೆರಂಪಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.