ಹಿರಿಯಡ್ಕದಲ್ಲಿ ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಚಾಲನೆ ; ವಿದ್ಯಾರ್ಥಿಗಳಿಂದ ಯಕ್ಷಗಾನ ಕಲಾಪ್ರದರ್ಶನ

0
6

ಹಿರಿಯಡ್ಕ : ವಿದ್ಯಾರ್ಥಿಗಳಲ್ಲಿ ಯಕ್ಷಗಾನ ಕಲೆಯ ಆಸಕ್ತಿ ಬೆಳೆಸುವ ಹಾಗೂ ಕರಾವಳಿಯ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಹಿರಿಯಡ್ಕದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ಕಿಶೋರ ಯಕ್ಷಗಾನ ಸಂಭ್ರಮಕ್ಕೆ ನ.26ರಂದು ಚಾಲನೆ ನೀಡಲಾಯಿತು.

ಮಣಿಪಾಲದ ಯಕ್ಷಗಾನ ವಿಮರ್ಶಕ ಪ್ರೊ. ಎಸ್.ವಿ. ಉದಯ ಕುಮಾರ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೆಲ್ಕೋ ಸಂಸ್ಥೆಯ ಜಿ.ಎಂ. ಗುರುಪ್ರಕಾಶ್ ಶೆಟ್ಟಿ ಹಾಗೂ ಉದ್ಯಮಿ ಶ್ರೀನಿವಾಸ ರಾವ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ್ ಹೆಗಡೆ ಸಹಕರಿಸಿದರು.

ಸಂಭ್ರಮದ ಮೊದಲ ಪ್ರದರ್ಶನವಾಗಿ ಸರ್ಕಾರಿ ಪ್ರೌಢಶಾಲೆ, ಮಣಿಪುರದ ವಿದ್ಯಾರ್ಥಿಗಳು ‘ಶ್ರೀಕೃಷ್ಣ ಪಾರಿಜಾತ’ ಯಕ್ಷಗಾನವನ್ನು ಪ್ರಸ್ತುತಪಡಿಸಿದರು. ಬಳಿಕ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪಟ್ಲದ ವಿದ್ಯಾರ್ಥಿಗಳು ‘ರತಿ ಕಲ್ಯಾಣ’ ಯಕ್ಷಗಾನವನ್ನು ಸೊಗಸಾಗಿ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ಎರಡು ದಿನಗಳ ಈ ಕಿಶೋರ ಯಕ್ಷಗಾನ ಸಂಭ್ರಮದಲ್ಲಿ ಒಟ್ಟು ನಾಲ್ಕು ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಯುವ ಪ್ರತಿಭೆಗಳಿಗೆ ಯಕ್ಷಗಾನ ಕಲೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಕಲ್ಪಿಸಿದೆ.