ಕವಿ ಸು. ಶಿ. ಶಾಂತಕುಮಾರ್ ಹರವೆ ಅವರಿಗೆ ‘ನವದುರ್ಗೆ ಕೃಪಾಸಿಂಧು’ ಇ-ಪ್ರಶಸ್ತಿ ಗೌರವ

0
6

ಹೂವಿನಹಡಗಲಿ : ಅರಳು ಮಲ್ಲಿಗೆ ಸಾಹಿತ್ಯ ವೇದಿಕೆ ರಾಜ್ಯ ಘಟಕ, ಹೂವಿನಹಡಗಲಿ, ವಿಜಯನಗರ ಜಿಲ್ಲೆ ವತಿಯಿಂದ ಆಯೋಜಿಸಲಾಗಿದ್ದ ‘ನವರಾತ್ರಿ ನವದುರ್ಗೆಯರ ನವೋಲ್ಲಾಸ’ ಎಂಬ ಉಪನ್ಯಾಸ ಮಾಲಿಕೆ ಹಾಗೂ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಚಾಮರಾಜನಗರ ಜಿಲ್ಲೆಯ ಕವಿ ಸು. ಶಿ. ಶಾಂತಕುಮಾರ್ ಹರವೆ ಅವರಿಗೆ ‘ನವದುರ್ಗೆ ಕೃಪಾಸಿಂಧು’ ಇ-ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಶರನ್ನವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಈ ಕಾರ್ಯಕ್ರಮವು ಅಕ್ಟೋಬರ್ 11ರಿಂದ 19ರವರೆಗೆ ಒಂಬತ್ತು ದಿನಗಳ ಕಾಲ ಗೂಗಲ್ ಮೀಟ್ ಮೂಲಕ ಆನ್‌ಲೈನ್‌ನಲ್ಲಿ ನಡೆಯಿತು. ನವದುರ್ಗೆಯರನ್ನು ಕುರಿತ ಉಪನ್ಯಾಸ ಮಾಲಿಕೆ ಹಾಗೂ ಕವಿಗೋಷ್ಠಿಯನ್ನು ಒಳಗೊಂಡಿದ್ದ ಈ ಭಕ್ತಿ ಪ್ರಧಾನ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳ ಕವಿಗಳು, ಕವಯಿತ್ರಿಯರು, ಸಾಹಿತಿಗಳು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಸಾಹಿತ್ಯದ ಮೂಲಕ ಭಕ್ತಿಯನ್ನು ಸಮರ್ಪಿಸಿದರು.

ಕಾರ್ಯಕ್ರಮದ ಎಲ್ಲಾ ಒಂಬತ್ತು ದಿನಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ ಚಾಮರಾಜನಗರ ತಾಲೂಕು ಹಾಗೂ ಜಿಲ್ಲೆಯ ಕವಿ ಸು. ಶಿ. ಶಾಂತಕುಮಾರ್ ಹರವೆ ಸೇರಿದಂತೆ ಭಾಗವಹಿಸಿದ ಎಲ್ಲರಿಗೂ ವೇದಿಕೆಯ ವತಿಯಿಂದ ‘ನವದುರ್ಗೆ ಕೃಪಾಸಿಂಧು’ ಎಂಬ ಇ-ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅರಳು ಮಲ್ಲಿಗೆ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎಂ.ಪಿ.ಎಂ. ಕೊಟ್ರಯ್ಯ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಿಕೆಯ ಗೌರವಾಧ್ಯಕ್ಷ ತೊ. ಮ. ಶಂಕ್ರಯ್ಯ, ಕಾರ್ಯದರ್ಶಿ ಹಾಲಪ್ಪ ಚಿಗಟೇರಿ, ಸಂಚಾಲಕ ಕಾರ್ತಿಕ್ ಆಚಾರ್ ಸೇರಿದಂತೆ ಪದಾಧಿಕಾರಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿ ಯಶಸ್ವಿಗೊಳಿಸಿದರು ಎಂದು ಸಂಸ್ಥಾಪಕ ಅಧ್ಯಕ್ಷರು ತಿಳಿಸಿದ್ದಾರೆ.