ಅಭಿವೃದ್ಧಿಯ ಬದ್ಧತೆಗೆ ಮೋದಿ ಆಡಳಿತದ 11 ವರ್ಷಗಳೇ ಸಾಕ್ಷಿ: ಕಿಶೋರ್ ಕುಮಾರ್ ಕುಂದಾಪುರ

0
88

ಕೇವಲ ರಾಜಕಾರಣ, ಅಧಿಕಾರ ಅನುಭವಿಸಲು ಸೀಮಿತವಾಗದ ಬಿಜೆಪಿ ದೇಶದ ಅಭಿವೃದ್ಧಿಯ ಬದ್ಧತೆ ಹೊಂದಿದ್ದು ಇದಕ್ಕೆ ಪ್ರಧಾನಿ ಮೋದಿ ನೇತೃತ್ವದ 11 ವರ್ಷಗಳ ಆಡಳಿತವೇ ಸಾಕ್ಷಿ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.

ಅವರು ‘ವಿಕಸಿತ ಭಾರತದ ಅಮೃತ ಕಾಲ’ – ‘ಸೇವೆ, ಸುಶಾಸನ, ಬಡವರ ಕಲ್ಯಾಣ’ದ ‘ಮೋದಿ ಸರಕಾರಕ್ಕೆ 11 ವರ್ಷ’ ಸಂಭ್ರಮದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಭಿವೃದ್ಧಿ ಜತೆಗೆ ಪಕ್ಷ ಸಂಘಟನೆ ಮುಖ್ಯ. ನೆಹರೂ ಬಳಿಕ ನಿರಂತರ ಮೂರು ಅವಧಿಗೆ ಪ್ರಧಾನಿಯಾದ ನರೇಂದ್ರ ಮೋದಿ ಅಭಿವೃದ್ಧಿಯ ಹರಿಕಾರರಾಗಿದ್ದು ನುಡಿದಂತೆ ನಡೆದಿದ್ದಾರೆ, ಪ್ರಣಾಳಿಕೆಯ ಗರಿಷ್ಠ ಭರವಸೆಗಳನ್ನು ಈಡೇರಿಸಿದ್ದಾರೆ. 2004ರಲ್ಲಿ ಕೇವಲ 7 ರಾಜ್ಯಗಳಲ್ಲಿದ್ದ ಬಿಜೆಪಿ ಅಧಿಕಾರ ಇಂದು 21 ರಾಜ್ಯಗಳಿಗೆ ವಿಸ್ತರಣೆಯಾಗಿದೆ. ದಿನಕ್ಕೆ 38 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿದ್ದು, ಭಾರತ ಜಗತ್ತಿನ ನಾಲ್ಕನೇ ಅತೀ ದೊಡ್ಡ ಆರ್ಥಿಕ ರಾಷ್ಟ್ರವಾಗಿದ್ದು ಮೊದಲ ಸ್ಥಾನಕ್ಕೆ ಏರಬೇಕನ್ನುವುದು ಬಿಜೆಪಿ ಕಾರ್ಯಕರ್ತರು ಮತ್ತು ದೇಶವಾಸಿಗಳ ಆಶಯವಾಗಿದೆ ಎಂದರು.

ಅಭಿಯಾನದ ಬಿಜೆಪಿ ಮಂಗಳೂರು ವಿಭಾಗ ಸಂಚಾಲಕ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ, ಜಮ್ಮು ಕಾಶ್ಮೀರಕ್ಕಿದ್ದ 370ನೇ ವಿಧಿ ರದ್ದತಿ ಕನಸು ನನಸಾಗಿದೆ. 4 ಕೋಟಿ ವಸತಿ, 12 ಕೋಟಿ ಶೌಚಾಲಯ, 68 ಲಕ್ಷ ಬೀದಿ ವ್ಯಾಪಾರಿಗಳಿಗೆ ನೆರವು, ಮುದ್ರಾ ಯೋಜನೆಯಡಿ ಉದ್ಯಮಕ್ಕೆ ಸಾಲದ ನೆರವು ನೀಡಲಾಗಿದೆ ಎಂದು ಹೇಳಿದರು.

ಜಿಲ್ಲಾ ಕಾರ್ಯಾಗಾರ ಜಿಲ್ಲಾ ಸಂಚಾಲಕ ರಾಜೇಶ್ ಕಾವೇರಿ ‘ಮೋದಿ ಸರ್ಕಾರಕ್ಕೆ 11 ವರ್ಷ’ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಡೆಯಲಿರುವ ವಿವಿಧ ಅಭಿಯಾನಗಳ ಕುರಿತು ವಿಸ್ತ್ರತ ಮಾಹಿತಿ ನೀಡಿದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ಕೆ.ರಾಘವೇಂದ್ರ ಕಿಣಿ, ರೇಷ್ಮಾ ಉದಯ ಶೆಟ್ಟಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಐರೋಡಿ ವಿಠ್ಠಲ ಪೂಜಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಬೈಲೂರು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಹಾವೀರ ಹೆಗ್ಡೆ ಸಹಿತ ಪಕ್ಷದ ಪ್ರಮುಖರು, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಚಾಲಕರು, ಸಹ ಸಂಚಾಲಕರು, ಅಭಿಯಾನದ ಮಂಡಲ ಸಂಚಾಲಕರು ಉಪಸ್ಥಿತರಿದ್ದರು.

ಜಿಲ್ಲಾ ಹಿರಿಯ ನಾಗರಿಕರ ಪ್ರಕೋಷ್ಠದ ಸಂಚಾಲಕ ನಾರಾಯಣ ಮೂರ್ತಿ ಅವರಿಗೆ ಸಿಹಿ ತಿನ್ನಿಸಿ ಪ್ರಧಾನಿ ಮೋದಿ ಆಡಳಿತದ 11 ವರ್ಷವನ್ನು ಸಂಭ್ರಮಿಸಲಾಯಿತು.

ಮೇ 25ರಂದು ನಡೆದ ಪ್ರಧಾನಿ ಮೋದಿ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮದ ನೇರ ಪ್ರಸಾರವನ್ನು ಮಂಡಲಗಳ 100% ಬೂತ್ ಗಳಲ್ಲಿ ವೀಕ್ಷಣೆ ಮಾಡಿ ವರದಿ, ಫೋಟೋ ಅಪ್ಲೋಡ್ ಮಾಡಿರುವ ಬಗ್ಗೆ ಉಡುಪಿ ನಗರ, ಗ್ರಾಮಾಂತರ ಹಾಗೂ ಬೈಂದೂರು ಮಂಡಲಗಳ ಅಧ್ಯಕ್ಷರುಗಳಾದ ದಿನೇಶ್ ಅಮೀನ್, ರಾಜೀವ್ ಕುಲಾಲ್, ದೀಪಕ್ ಕುಮಾರ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

ಉಡುಪಿ ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷೆ ರಮ್ಯಾ ರಾವ್ ಉಪ್ಪೂರು ವಂದೇ ಮಾತರಂ ಹಾಡಿದರು. ಜಿಲ್ಲಾ ಕಾರ್ಯಾಗಾರ ಸಹ ಸಂಚಾಲಕ ಶ್ರೀಕಾಂತ್ ನಾಯಕ್ ಸ್ವಾಗತಿಸಿದರು. ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯಾಗಾರ ಸಹ ಸಂಚಾಲಕ ದಿಲೇಶ್ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here