ಕೇರಳ: ಕೇರಳದ ತ್ರಿಶೂರ್ ನಲ್ಲಿ ಅಮಾನವೀಯ ಘಟನೆ ನಡೆದಿದೆ. ವಿವಾಹ ಪೂರ್ವ ಸಂಬಂಧದಿಂದ ಹುಟ್ಟಿದ ಎರಡು ಶಿಶುಗಳನ್ನು ಹೆತ್ತ ತಾಯಿಯೇ ಹತ್ಯೆ ಮಾಡಿರುವ ಬೆಚ್ಚಿ ಬೀಳುವ ಘಟನೆ ತ್ರಿಶೂರ್ ನ ದಕ್ಷಿಣ ಭಾಗವಾದ ಪುದುಕೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಕೃತ್ಯ ಎಸಗಿದ ಅನೀಶಾ ಹಾಗೂ ಭವಿನ್ ನನ್ನು ಬಂಧಿಸಲಾಗಿದೆ.

ಫೇಸ್ ಬುಕ್ ಲವ್…ರಿಲೇಷನ್ ಶಿಪ್…ಮರ್ಡರ್!
2020 ರಲ್ಲಿ ಫೇಸ್ ಬುಕ್ ಮೂಲಕ ಇಬ್ಬರ ಪರಿಚಯವಾಗಿದ್ದು, ಬಳಿಕ ಪ್ರೀತಿಯಾಗಿ ವಿವಾಹಪೂರ್ವ ಲೈಂಗಿಕ ಸಂಬಂಧ ಬೆಳೆಯುವವರೆಗೆ ಮುಂದುವರಿದಿತ್ತು. 2022 ರಲ್ಲಿ ಅನೀಶಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮನೆಯವರಿಗೆ ಹೆದರಿ ಮಗುವನ್ನು ಕೊಂದು, ಭವಿನ್ ಬಳಿ ಮೃತದೇಹವನ್ನು ಹೂಳಲು ಕೊಟ್ಟಿದ್ದಾಳೆ.
2024 ರಲ್ಲಿ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದ ಆಕೆ ಆ ಮಗುವನ್ನೂ ಕೊಂದು ಹೂಳಲು ಭವಿನ್ ಗೆ ಕೊಟ್ಟಿದ್ದಾಳೆ. ಇತ್ತೀಚೆಗೆ ಭವಿನ್ ನೊಂದಿಗಿನ ಸಂಬಂಧ ತೊರೆದ ಅನೀಶಾ ಬೇರೆ ಮದುವೆ ತಯಾರಿ ನಡೆಸಿದ್ದಳು. ಈ ವಿಚಾರ ತಿಳಿಯುತ್ತಿದ್ದಂತೆ ಭವಿನ್, ತಾನು ಹೂತಿದ್ದ ಶಿಶುಗಳ ಮೃತದೇಹಗಳ ಕಳೇಬರವನ್ನು ಚೀಲದಲ್ಲಿ ತುಂಬಿ ನಿನ್ನೆ ಮಧ್ಯರಾತ್ರಿ ಪುದುಕೋಡ್ ಪೊಲೀಸ್ ಠಾಣೆಗೆ ಬಂದಿದ್ದ. ಆಗಲೇ ಈ ಘೋರ ಕೃತ್ಯ ಬೆಳಕಿಗೆ ಬಂದಿದ್ದು. ಸದ್ಯ ಇಬ್ಬರನ್ನೂ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.