ಮೂಡುಬಿದಿರೆ ಶ್ರೀ ಮಹಾವೀರ ಪ.ಪೂ. ಕಾಲೇಜು: ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

0
105

ವ್ಯಸನಗಳ ದಾಸರಾದರೆ ಚಾರಿತ್ರ್ಯ ಹಾಳಾದಂತೆ: ಮುನಿರಾಜ ರೆಂಜಾಳ

ಮೂಡುಬಿದಿರೆ: ಇಂದು ನಾವು ಆರೋಗ್ಯದ ಸಂಕಲ್ಪವನ್ನು ಮಾಡಿಕೊಳ್ಳಬೇಕಾದ ಅಗತ್ಯವಿದೆ. ಆರೋಗ್ಯಎಂದಾಗ ಕೇವಲ ದೈಹಿಕ ಮಾತ್ರವಲ್ಲ ಮಾನಸಿಕ ಆರೋಗ್ಯವೂ ಸೇರುತ್ತದೆ. ಪ್ರಸ್ತುತ ಸಮಾಜದಲ್ಲಿ ಹಾದಿ ತಪ್ಪಿಸುವ ಹಲವು ವಿಚಾರಗಳು ನಮ್ಮ ಮುಂದಿವೆ, ಅದರಲ್ಲಿ ಒಂದು ವ್ಯಸನಗಳ ಪ್ರಭಾವ. ಇದು ಬೇರೆ ಬೇರೆ ಹಂತಗಳಲ್ಲಿ ನಮ್ಮ ಬದುಕಿನೊಳಗಡೆ ನುಸುಳುತ್ತವೆ. ಇವುಗಳನ್ನು ನಿಯಂತ್ರಿಸಿಕೊಂಡು ಬದುಕನ್ನು ನಡೆಸುವ ಸವಾಲುಗಳು ನಮಗಿವೆ. ವ್ಯಸನಗಳ ದಾಸರಾಗುವುದು ಎಂದರೆ ಚಾರಿತ್ರ್ಯ ಹಾಳಾಗುತ್ತದೆ ಎಂದೇ ಅರ್ಥ, ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ ಎಂದು ಜೈನ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ ಇವರ ಜಂಟಿ ಆಶ್ರಯದಲ್ಲಿ ಶ್ರೀ ಮಹಾವೀರ ಕಾಲೇಜಿನ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ನಡೆಸಲಾದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಇವರು ಮಾತನಾಡಿದರು.

ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ ಎಂದು ಪುರಂದರದಾಸರ ಕೀರ್ತನೆಯನ್ನು ಪುನರುಚ್ಚರಿಸುತ್ತಾ ಈ ಜನ್ಮವನ್ನು ಹಾಳುಮಾಡಿಕೊಳ್ಳುವ ಯಾವ ಹಕ್ಕು ನಮಗಿಲ್ಲ, ಶ್ರಮವೇ ಆರೋಗ್ಯದ ಮೂಲ. ಆಧುನಿಕ ಸೌಲಭ್ಯಗಳಿಂದ ಇಂದು ಶ್ರಮ ಇಲ್ಲವಾಗಿದೆ. ಜೊತೆಗೆ ದುಶ್ಚಟಗಳು ಸೇರಿಕೊಂಡರೆ ಬದುಕು ಸಂಪೂರ್ಣವಾಗಿ ಹಾಳಾಗುವುದರಲ್ಲಿ ಸಂಶಯವೇ ಇಲ್ಲ. ದುಶ್ಚಟಗಳಿಂದ ಸಾಮಾಜಿಕವಾಗಿಯೂ, ಆರ್ಥಿಕವಾಗಿಯೂ ನಷ್ಟ ಕಟ್ಟಿಟ್ಟ ಬುತ್ತಿ. ಹಾಗಾಗಿ ನಮ್ಮ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳುವ ಹೊಣೆ ನಮ್ಮದೆ. ನಾವೆಲ್ಲರೂ ದೇಶದ ಆಸ್ತಿಯಾಗಬೇಕು ಎಂದು ಅವರು ಕರೆಕೊಟ್ಟರು.
ಪದವಿ ಪ್ರಾಂಶುಪಾಲರಾದ ಡಾ. ರಾಧಾಕೃಷ್ಣರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಪದವಿಪೂರ್ವ ಪ್ರಾಂಶುಪಾಲರಾದ ಲೆಫ್ಟಿನೆಂಟ್ ವಿಜಯಲಕ್ಷ್ಮೀ, ಯೋಜನಾಧಿಕಾರಿ ಧನಂಜಯ, ಒಕ್ಕೂಟದ ಕಾರ್ಯದರ್ಶಿ ಹರೀಶ್ ಹಾಗೂ ಮೇಲ್ವಿಚಾರಕ ಚಂದ್ರಹಾಸ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here