ಕೋಮು ಪ್ರಚೋದನಕಾರಿ ಪೋಸ್ಟ್ ಆರೋಪ; ಇಬ್ಬರ ಮೇಲೆ ಬಿತ್ತು FIR

0
239

ಉಡುಪಿ: ರಾಜ್ಯ ಸರ್ಕಾರ ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಸ್ತಾಕ್ ಅವರಿಗೆ ಆಹ್ವಾನ ನೀಡಿರುವ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೋಮ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಜಗದೀಶ ಉಡುಪ ಎಂಬ ಹೆಸರಿನ ಪೇಸ್‌ಬುಕ್ ಖಾತೆಯಲ್ಲಿ ʻರಾಜ್ಯದಲ್ಲಿ ಏನಾಗ್ತಿದೆ, ದಸರಾ ಉದ್ಘಾಟನೆ ಬಾನು ಮುಷ್ಕಾಕ್ ಅವರಿಂದ ಅಂತೇ, ಹಿಂದೂ ಧರ್ಮದ ನಾಡಹಬ್ಬ ಧಾರ್ಮಿಕ ಕಾರ್ಯಕ್ರಮ ಉದ್ಘಾಟನೆಗೇ ಹಿಂದೂಗಳಿಲ್ಲವೇ.., ಕೇವಲ ಒಂದೇ ಒಂದು ಸಮುದಾಯದ ಒಲೈಕೆಗಾಗಿ ಶ್ರೇಷ್ಠ ಹಿಂದೂ ಧರ್ಮದ ಅವಹೇಳನ ಮಾಡುವುದು ಖಂಡಿತ ತಪ್ಪು, ಒಂದು ವೇಳೆ ಉದ್ಘಾಟನೆ ಮಾಡಿಸಿದರೆ ಅದರ ಪ್ರತಿಫಲವನ್ನು ಅನುಭವಿಸಬೇಕಾಗುತ್ತದೆʼ ಎಂದು ಪೋಸ್ಟ್ ಮಾಡಿದ್ದು, ಜಾಲತಾಣದಲ್ಲಿ ಪ್ರಚೋದನಕಾರಿ ಹಾಗೂ ಕೋಮು ಸೌಹಾರ್ದಕ್ಕೆ ದಕ್ಕೆ ಉಂಟಾಗುವ ರೀತಿಯಲ್ಲಿ ಪೋಸ್ಟ್ ಮಾಡಿದ ಆರೋಪದಲ್ಲಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಟ್ಟೆ ಗ್ರಾಮದ ಸುದೀಪ್ ಶೆಟ್ಟಿ ಫೇಸ್‌ಬುಕ್‌ನಲ್ಲಿ ಬಾನು ಮುಸ್ತಾಕ್ ಇವರಿಂದ ದಸರಾ ಉದ್ಘಾಟನೆ ಎಂಬುದಾಗಿ ಸಿಎಂ ಘೋಷಣೆ ಎಂಬ ಪೋಸ್ಟರ್‌ಗೆ, ದಸರಾ ಅನ್ನೋದು ಹಿಂದುಗಳ ಸಾಂಸ್ಕೃತಿಕ ಹಬ್ಬ, ಅಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಿಂದೂ ಸಂಪ್ರದಾಯದಂತೆ ನಡೆಯಲ್ಪಡುತ್ತದೆ, ಅಂತಹವರಲ್ಲಿ ಸನಾತನ ಹಿಂದೂ ಸಂಸ್ಕೃತಿಯನ್ನು ಒಪ್ಪದ ಬಾನು ಮುಸ್ತಾಕ್ ಅವರಿಂದ ದಸರಾ ಉದ್ಘಾಟನೆ ಮಾಡುವ ಅಗತ್ಯ ಏನಿದೆ ಎಂಬುದಾಗಿ ಪೋಸ್ಟ್ ಮಾಡಿದ್ದರು. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಜಾತಿ ಮತ್ತು ಧರ್ಮಗಳ ನಡುವೆ ವೈಷಮ್ಯ, ವೈರತ್ವ ಉಂಟು ಮಾಡುವ ರೀತಿಯಲ್ಲಿ ಪೋಸ್ಟ್ ಮಾಡಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here