ಮೂಡುಬಿದರೆ: ಪುರಸಭೆ, ಸರಕಾರಿ ಆಸ್ಪತ್ರೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿ ಕಚೇರಿ, ಮಂಗಳೂರು, ಇನ್ನರ್ ವೀಲ್ ಕ್ಲಬ್, ರೋಟರಿ ಕ್ಲಬ್ ಟೆಂಪಲ್ ಟೌನ್ ಇವರ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆಯಲ್ಲಿ ವಿಶಿಷ್ಟ ಗುರುತಿನ ಚೀಟಿ ಶಿಬಿರ ಸಪ್ಟೆಂಬರ್ 26ರಂದು ಸಮಾಜ ಮಂದಿರದಲ್ಲಿ ನಡೆಯಿತು.

ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ ಶ್ವೇತಾ ಜೈನ್ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸರಕಾರವು ಯುಡಿಐಡಿ ಎನ್ನುವ ವಿಶಿಷ್ಟ ಅಂಗವೈಕಲ್ಯ ಗುರುತಿನ ಚೀಟಿಯನ್ನು ನೀಡುತ್ತಿದೆ. ಈ ಚೀಟಿ ರಾಷ್ಟ್ರೀಯ ಮಟ್ಟದಲ್ಲಿ ಡಾಟಾಬೇಸನ್ನು ರಚಿಸುವ ಉದ್ದೇಶವನ್ನು ಹೊಂದಿದ್ದು ಸರಕಾರಿ ಯೋಜನೆಗಳು, ಪ್ರಯೋಜನಗಳು ಸುಲಭವಾಗಿ ಫಲಾನುಭವಿಗೆ ತಲುಪಿಸಲು ಪಾರದರ್ಶಿಕವಾಗಿ ಸಹಾಯ ಮಾಡುತ್ತಿದೆ. ಅಂತಹ ಕಾರ್ಯಕ್ರಮವನ್ನು ಮೂಡುಬಿದಿರೆ ತಾಲೂಕಿನಲ್ಲಿಯೇ ನಡೆಸಿ ಬಹಳ ಉಪಕಾರವನ್ನು ಮಾಡಲಾಗುತ್ತಿದೆ ಎಂದು ಪ್ರಶಂಶಿಸಿದರು. ಪ್ರತಿ ತಿಂಗಳ ಮಂಗಳವಾರ ಮತ್ತು ಬುಧವಾರದಂದು ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾಂಪ್ ನಡೆಯುತ್ತಿದ್ದು ಮೂಡುಬಿದಿರೆಯಿಂದ ಮಂಗಳೂರಿಗೆ ಬರಲು ಅಸಾಧ್ಯವಾದವರಿಗೆ ಈ ಅವಕಾಶವನ್ನು ಸ್ಥಳೀಯವಾಗಿ ಒದಗಿಸಿಕೊಡಲಾಗಿದೆ ಕಾರ್ಯಕ್ರಮವನ್ನು ಸಂಘಟಿಸಿದ ಎಲ್ಲರನ್ನು ಕೂಡ ಪ್ರಶಂಸಿಸಬೇಕು ಎಂದು ಮೆಚ್ಚುಗೆಯ ನುಡಿಗಳನ್ನು ನುಡಿದರು.
ವೇದಿಕೆಯಲ್ಲಿ ಸರಕಾರಿ ಆಸ್ಪತ್ರೆಯ ಡಾ ಅಕ್ಷತಾ, ಮೂಡುಬಿದರೆ ಪುರಸಭೆಯ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು, ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ ಕೆ ಹಾಜರಿದ್ದರು. ತಾಲೂಕು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಯೋಜಕ ಜಯಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ವರದಿ ರಾಯಿ ರಾಜಕುಮಾರ

