108 ಆಂಬುಲೆನ್ಸ್​ ಸೇವೆಯಲ್ಲಿ ವ್ಯತ್ಯಯ

0
172

ಉಡುಪಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 108 ಆಂಬುಲೆನ್ಸ್​ ಸೇವೆ ದಿನದ 24 ಗಂಟೆ ಬದಲಿಗೆ ಕೇವಲ 16 ಗಂಟೆ ಮಾತ್ರ ಸೇವೆ ನೀಡುತ್ತಿದ್ದು, ರೋಗಿಗಳು ತುರ್ತು ಸೇವೆ ಸಿಗದೆ ಪರದಾಡುವಂತಾಗಿದೆ.

108 ಆಂಬುಲೆನ್ಸ್​ ದಿನದ 24 ಗಂಟೆ ಸೇವೆ ನೀಡುವ ಉದ್ದೇಶ ಹೊಂದಿದ್ದರೂ 1 ವರ್ಷದ ಹಿಂದೆ ರಾಜ್ಯಸರ್ಕಾರ 3 ಪಾಳಿ ಕೆಲಸ ನಿಯಮ ಜಾರಿಗೊಳಿಸಿದ ಬಳಿಕ ಸಮಸ್ಯೆ ಹೆಚ್ಚಾಗಿದೆ. ಖಾಸಗಿ ಕಂಪೆನಿ ಜೊತೆಗೆ ಆ್ಯಂಬುಲೆನ್ಸ್​ ನಿರ್ವಹಣೆ ಜವಾಬ್ದಾರಿ ಒಪ್ಪಂದ ಹಿಂಪಡೆದ ನಂತರ ಅನೇಕ ಮಂದಿ ಸಿಬ್ಬಂದಿ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಆ್ಯಂಬುಲೆನ್ಸ್​ ನಿರ್ವಹಣೆಗೆ ಸಿಬ್ಬಂದಿ ಕೊರತೆ ಎದುರಾಗಿದೆ. ತುರ್ತು ಸಂದರ್ಭದಲ್ಲಿ ಐದಾರು ಗಂಟೆಗಳು ಕಳೆದರೂ ಆಂಬುಲೆನ್ಸ್​ ಬರುತ್ತಿಲ್ಲ.
ಬಡ ರೋಗಿಗಳನ್ನು ಜಿಲ್ಲಾಸ್ಪತ್ರೆಯಿಂದ ಮಂಗಳೂರಿನ ವೆನ್ಲಾಕ್​ ಆಸ್ಪತ್ರೆಗೆ ದಾಖಲಿಸುವ ಅಗತ್ಯ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ 108 ಸೇವೆಗೆ ಸಿಗದಿದ್ದರೆ ದುಬಾರಿ ಹಣ ತೆತ್ತು ಖಾಸಗಿ ಆಂಬುಲೆನ್ಸ್​ ಕಳುಹಿಸುವ ಅನಿವಾರ್ಯತೆ ಇದೆ. ಇದರಿಂದ ರೋಗಿಗಳು ದಾರಿ ಮಧ್ಯೆ ಪ್ರಾಣ ಬಿಡುವ ಅಪಾಯವಿದೆ.

ಲೆಕ್ಕಕ್ಕುಂಟು ಆಟಕ್ಕಿಲ್ಲ!
ಪ್ರಸ್ತುತ 108 ಸೇವೆ ಸರ್ಕಾರದ ವ್ಯಾಪ್ತಿಯಲ್ಲಿದ್ದು, 3 ಪಾಳಿಯಲ್ಲಿ 8 ಗಂಟೆಯಂತೆ 24 ಗಂಟೆ ಕರ್ತವ್ಯ ನಿರ್ವಹಿಸಬೇಕಾಗಿದೆ. ಆದರೆ ಸಿಬ್ಬಂದಿ ಕೊರತೆಯಿಂದ ಯಾವ ಪಾಳಿಯಲ್ಲೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಫೋನ್​ ಮಾಡಿದರೆ ಆಂಬುಲೆನ್ಸ್​ ಖಾಲಿ ಇಲ್ಲ ಅಥವಾ ತಾಂತ್ರಿಕ ದೋಷ ಎಂಬ ಸಬೂಬು ನೀಡಲಾಗುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಆರಂಭದಲ್ಲಿ 18 ಆಂಬುಲೆನ್ಸ್​ ಗಳು ಕಾರ್ಯನಿರ್ವಹಿಸುತ್ತಿದ್ದು, ಪಾಳಿಯಲ್ಲಿ ನೀಡುತ್ತಿರುವುದರಿಂದ ತುರ್ತು ಸಂದರ್ಭದಲ್ಲಿ ಆರೇಳು ಅಂಬುಲೆನ್ಸ್​ ಗಳು ಮಾತ್ರ ಲಭ್ಯವಿದೆ. ಇವುಗಳಲ್ಲಿ ತಾಂತ್ರಿಕ ದೋಷ ಅಥವಾ ಇನ್ನಿತರ ಕಾರಣಗಳಿಂದ ಕೆಲವು ಸೇವೆಗೆ ಸಿಗುತ್ತಿಲ್ಲ. ಹೀಗಾಗಿ ಶಿಫ್ಟ್​ ವ್ಯವಸ್ತೆಯನ್ನು ಕೈ ಬಿಡಬೇಕು. ಎಲ್ಲಾ 18 ಆಂಬುಲೆನ್ಸ್​ ಗಳು 24*7 ಲಭ್ಯವಾಗಬೇಕು.
ವಿಶು ಶೆಟ್ಟಿ ಅಂಬಲಪಾಡಿ, ಸಮಾಜಸೇವಕರು.

LEAVE A REPLY

Please enter your comment!
Please enter your name here