ಗಾಂಧಿ ಜಯಂತಿ – ಸತ್ಯ ಮತ್ತು ಅಹಿಂಸೆಯ ಶಾಶ್ವತ ದೀಪ

0
53

ಅಕ್ಟೋಬರ್ 2 – ಈ ದಿನವು ಭಾರತದ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದೆ. ಏಕೆಂದರೆ ಇದು ಮಹಾತ್ಮ ಗಾಂಧಿಜಿಯವರ ಜನ್ಮದಿನ. ಜಗತ್ತೇ “ಅಹಿಂಸಾ ದಿನ”ವನ್ನಾಗಿ ಗುರುತಿಸಿರುವ ಈ ದಿನ, ಕೇವಲ ಒಬ್ಬ ವ್ಯಕ್ತಿಯ ಜನ್ಮದ ನೆನಪಲ್ಲ; ಬದಲಾಗಿ ಒಂದು ದಾರ್ಶನಿಕ ಚಳುವಳಿ, ಮಾನವ ಮೌಲ್ಯಗಳ ಶಾಶ್ವತ ಸಂಕೇತ.

ಮೋಹನದಾಸ ಕರಮಚಂದ್ ಗಾಂಧಿ, ಜನರ ಮನದಲ್ಲಿ “ಮಹಾತ್ಮ” ಎಂಬ ಬಿರುದಿನಿಂದ ಪ್ರಸಿದ್ಧರಾದವರು, ಭಾರತವನ್ನು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಳಿಸಿದ ಪ್ರಮುಖ ಶಕ್ತಿ. ಆದರೆ ಅವರು ಹೋರಾಡಿದ ಹಾದಿ ಕತ್ತಿ-ಗುರಾಣಿಯದ್ದಲ್ಲ; ಅದು ಸತ್ಯ ಮತ್ತು ಅಹಿಂಸೆಯ ಹಾದಿ. ಈ ಹಾದಿ ಅಂದು ಭಾರತವನ್ನು ಸ್ವಾತಂತ್ರ್ಯದತ್ತ ಕರೆದೊಯ್ದಂತೆ, ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ.

ಗಾಂಧೀಜಿಯ ಆದರ್ಶಗಳು

ಸತ್ಯ : ಗಾಂಧೀಜಿ ನಂಬಿದ ಪ್ರಕಾರ ಸತ್ಯವೇ ಪರಮೇಶ್ವರ. ಸುಳ್ಳು, ಮೋಸ, ಅನ್ಯಾಯ – ಇವೆಲ್ಲವನ್ನೂ ತೊರೆದು ನಿಜದ ಮೇಲೆ ನಿಲ್ಲುವುದು ಮಾತ್ರ ಮನುಷ್ಯನ ಜೀವನವನ್ನು ಉನ್ನತಮಟ್ಟಕ್ಕೆ ಕರೆದೊಯ್ಯುತ್ತದೆ.

ಅಹಿಂಸೆ : ಗಾಂಧಿಜಿಯವರ ಕ್ರಾಂತಿ ಹಿಂಸೆಯಿಲ್ಲದ ಕ್ರಾಂತಿ. ಇಂಗ್ಲೀಸರ ಬಲಶಾಲಿ ಸೇನೆಯ ಎದುರು ನಿರಾಯುಧ ಜನರನ್ನು ನಿಲ್ಲಿಸಿ ಅವರು ತೋರಿಸಿದ ಹಾದಿ ಅಹಿಂಸೆಯ ಮಹತ್ತನ್ನು ಜಗತ್ತಿಗೆ ಸಾರಿತು.

ಸತ್ಯಾಗ್ರಹ : ಸತ್ಯದ ಆಧಾರದ ಮೇಲೆ ಜನಶಕ್ತಿ ಒಗ್ಗೂಡಿಸುವ ಈ ಹೋರಾಟವು ಪ್ರಪಂಚದ ಅನೇಕ ರಾಷ್ಟ್ರಗಳಿಗೆ ಪ್ರೇರಣೆ ನೀಡಿತು. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ನೆಲ್ಸನ್ ಮಂಡೇಲಾ ಮುಂತಾದ ನಾಯಕರು ಗಾಂಧೀಜಿಯವರ ಹಾದಿಯನ್ನು ಅನುಸರಿಸಿದರು.

ಸರಳ ಜೀವನ – ಉನ್ನತ ಚಿಂತನೆ: ಗಾಂಧಿಜಿಯವರ ಕೈಯಲ್ಲಿನ ಚಕ್ರ ಒಂದು ದೇಶದ ಆತ್ಮಸ್ವಾಭಿಮಾನವನ್ನು ಎಚ್ಚರಿಸಿದ ಚಿಹ್ನೆಯಾಯಿತು. ಭಾರತೀಯರ ಸ್ವಾವಲಂಬನೆ, ಸ್ವದೇಶಿ ಚಿಂತನೆ, ಗ್ರಾಮೀಣ ಪುನರುತ್ಥಾನ – ಇವುಗಳಲ್ಲೇ ಅವರ ನಂಬಿಕೆ.

ಇಂದು ವಿಜ್ಞಾನ ಪ್ರಗತಿ, ತಂತ್ರಜ್ಞಾನ ವಿಸ್ತರಣೆ, ಜಾಗತೀಕರಣ ಇವೆಲ್ಲವೂ ಸಮಾಜವನ್ನು ಬದಲಿಸುತ್ತಿದ್ದರೂ, ಭ್ರಷ್ಟಾಚಾರ, ಹಿಂಸೆ, ಅಸಮಾನತೆ, ಅಸಹಿಷ್ಣುತೆ – ಇವು ಇನ್ನೂ ಸಮಾಜದ ಕಣ್ಣಿಗೆ ಮಣ್ಣಾಗಿವೆ. ಇಂತಹ ಸಂದರ್ಭದಲ್ಲಿ ಗಾಂಧೀಜಿಯವರ ಆದರ್ಶಗಳು ಅತೀ ಪ್ರಸ್ತುತವಾಗುತ್ತವೆ.

ನಾವು ನ್ಯಾಯವನ್ನು ಬಯಸಿದರೆ ಸತ್ಯದ ಹಾದಿ ಹಿಡಿಯಬೇಕು.
ಶಾಂತಿ ಮತ್ತು ಪ್ರೀತಿಯನ್ನು ಬಯಸಿದರೆ ಅಹಿಂಸೆಯ ಮಾರ್ಗವೇ ಏಕೈಕ ದಾರಿ.
ಸಮಾಜದಲ್ಲಿ ಬದಲಾವಣೆ ಬಯಸಿದರೆ, “ನೀನು ನೋಡಲು ಬಯಸುವ ಬದಲಾವಣೆ ನಿನ್ನಿಂದಲೇ ಆರಂಭಿಸು” ಎಂಬ ಗಾಂಧಿಜಿಯ ನುಡಿಗಟ್ಟು ಜಾರಿ ಮಾಡಬೇಕು.

ಗಾಂಧೀಜಿಯವರ ಸತ್ಯ-ಅಹಿಂಸೆಯ ತತ್ವಗಳು ಕೇವಲ ಭಾರತದಷ್ಟೇ ಅಲ್ಲ, ಇಡೀ ಜಗತ್ತಿಗೆ ದಾರಿದೀಪ. ದ್ವೇಷದ ರಾಜಕೀಯ, ಯುದ್ಧದ ಆಕ್ರಮಣ, ಅಸಮಾನತೆಯ ಹೋರಾಟ – ಇವುಗಳ ವಿರುದ್ಧ ನಿಲ್ಲಲು ಇಂದು ಕೂಡಾ ಅವರ ತತ್ತ್ವಗಳು ಅತ್ಯುತ್ತಮ ಶಸ್ತ್ರಾಸ್ತ್ರ.

ಗಾಂಧಿ ಜಯಂತಿಯನ್ನು ಆಚರಿಸುವುದು ಕೇವಲ ಅವರ ಪ್ರತಿಮೆಗಳಿಗೆ ಹೂಮಾಲೆ ಹಾಕುವುದಲ್ಲ; ಪ್ರತಿದಿನ ನಮ್ಮ ನಡೆ-ನುಡಿಗಳಲ್ಲಿ ಅವರ ಆದರ್ಶಗಳನ್ನು ಬದುಕಿಸುವುದೇ ನಿಜವಾದ ಗೌರವ.
ಸತ್ಯ, ಅಹಿಂಸೆ, ಸೌಹಾರ್ದತೆ, ಸ್ವಾವಲಂಬನೆ – ಇವುಗಳನ್ನೇ ನಮ್ಮ ಜೀವನದ ಆಧಾರವನ್ನಾಗಿಸಿಕೊಂಡಾಗ ಮಾತ್ರ ಗಾಂಧೀಜಿಗೆ ಸಲ್ಲಿಸುವ ಶ್ರೇಷ್ಠ ಶ್ರದ್ಧಾಂಜಲಿ ಅರ್ಥಪೂರ್ಣವಾಗುತ್ತದೆ.

✍ ವಿಂಧ್ಯಾ ಎಸ್. ರೈ
ಲೇಖಕಿ, ಕವಯತ್ರಿ

LEAVE A REPLY

Please enter your comment!
Please enter your name here