ಕಟೀಲ್ : 1928ರ ಸೆಪ್ಟೆಂಬರ್ 23ರಂದು ಉಡುಪಿಯಲ್ಲಿ ಸ್ಥಾಪನೆಯಾಗಿ, 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್ನ್ಯಾಷನಲ್ ವತಿಯಿಂದ ಕುಂದಾಪುರ ವಲಯ ಸಂಚಾಲಕರಾಗಿ ಹಿರಿಯ ವಕೀಲೆ ಶರ್ಮಿಳಾ ಯೋಗೇಶ್ ಆಚಾರ್ಯ ಅವರನ್ನು ನೇಮಕ ಮಾಡಲಾಗಿದೆ.
ಶರ್ಮಿಳಾ ಯೋಗೇಶ್ ಆಚಾರ್ಯ ಅವರು ಬಿ.ಎ., ಎಲ್.ಎಲ್.ಬಿ. ಪದವೀಧರರಾಗಿದ್ದು, ಕುಂದಾಪುರದಲ್ಲಿ ಹಲವು ವರ್ಷಗಳಿಂದ ಯಶಸ್ವಿಯಾಗಿ ವಕೀಲ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಅವರು ಶ್ರೀ ಮೂಕಾಂಬಿಕಾ ದೇವಸ್ಥಾನ, ಕೊಲ್ಲೂರಿನ ಮಾಜಿ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅಲ್ಲದೆ, ಕೆನರಾ ಬ್ಯಾಂಕ್, ಎಸ್‌ಸಿಡಿಸಿಸಿ ಬ್ಯಾಂಕ್, ಶ್ರೇಯ ಪ್ರಾಥಮಿಕ ಸಹಕಾರ ಸಂಘ, ಎಸ್.ಕೆ. ಗೋಲ್ಡ್‌ಸ್ಮಿತ್ ಸಹಕಾರ ಸಂಘ, ಮೊಳಹಳ್ಳಿ ವಿಎಸ್‌ಎಸ್ ಬ್ಯಾಂಕ್ ಹಾಗೂ ಬಸ್ರೂರು ವಿಎಸ್‌ಎಸ್ ಬ್ಯಾಂಕ್ ಸೇರಿದಂತೆ ಹಲವು ಹಣಕಾಸು ಸಂಸ್ಥೆಗಳ ಪ್ಯಾನೆಲ್ ವಕೀಲರಾಗಿ ಹಾಗೂ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿ ಕಾನೂನು ಕ್ಷೇತ್ರದಲ್ಲಿ ವಿಶಿಷ್ಟ ಅನುಭವ ಗಳಿಸಿದ್ದಾರೆ.
ಅವರ ವೃತ್ತಿಪರ ಅನುಭವ, ಸಾಮಾಜಿಕ ಬದ್ಧತೆ, ಸಂಘಟನಾ ಸಾಮರ್ಥ್ಯ ಹಾಗೂ ತುಳು ನಾಡು-ನುಡಿಯ ಮೇಲಿನ ಅಭಿಮಾನವನ್ನು ಪರಿಗಣಿಸಿ ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಕೇಂದ್ರೀಯ ಅಧ್ಯಕ್ಷ ಡಾ. ಅವಿನ್ ಬಿ. ಆರ್. ಆಳ್ವ, ಪ್ರಧಾನ ಕಾರ್ಯದರ್ಶಿ ಅರವಿಂದ ಬೆಳ್ಚಾಡ ಹಾಗೂ ಪ್ರಧಾನ ಸಂಚಾಲಕ ವಿಶ್ವನಾಥ ಆಚಾರ್ಯ ಪೆರ್ಡೂರು ಅವರು ಅವರನ್ನು ಕುಂದಾಪುರ ವಲಯ ಸಂಚಾಲಕರಾಗಿ ನೇಮಕಗೊಳಿಸಿದ್ದಾರೆ.
2028ರಲ್ಲಿ ನಡೆಯಲಿರುವ ತುಳುವ ಮಹಾಸಭೆಯ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದು, ತುಳುವ ನಾಗರಿಕತೆಯ ವೈಭವವನ್ನು ಮರುಸ್ಥಾಪಿಸುವುದು ಸಾಹಿತ್ಯ, ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯ ಸಂರಕ್ಷಣೆ ಹಾಗೂ ಕುಂದಾಪುರ ವಲಯದಲ್ಲಿ ಕುಂದ ಕನ್ನಡ ಮತ್ತು ತುಳು ಭಾಷೆಯ ಐಕ್ಯತೆಯನ್ನು ಸಂಘಟಿಸಿ ವಿವಿಧ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ಸಂಘಟನೆ ತಿಳಿಸಿದೆ.
ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್ನ ಗೌರವಾಧ್ಯಕ್ಷ ಶ್ರೀ ಶ್ರೀ ಹರಿನಾರಾಯಣ ದಾಸ ಅಸ್ರಣ್ಣ (ಕಟೀಲ್), ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ ರೈ ಹಾಗೂ ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ ಅವರು ಹರ್ಷದಿಂದ ಸ್ವಾಗತಿಸಿ, ಶರ್ಮಿಳಾ ಯೋಗೇಶ್ ಆಚಾರ್ಯ ಅವರಿಗೆ ಅಭಿನಂದನೆ ಸಲ್ಲಿಸಿ, ಅವರ ಮುಂದಿನ ಕಾರ್ಯಾವಧಿಗೆ ಶುಭ ಹಾರೈಸಿದ್ದಾರೆ.

