ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯನ್ನು ಭಾಸ್ಕರ ರೈ ಕಟ್ಟ ಉದ್ಘಾಟಿಸಿದರು. ಸುನೀಲ್ ಆಚಾರ್, ಡಾ.ಅಮರಶ್ರೀ ಅಮರನಾಥ್, ರಮೇಶ್ ಕೋಟೆ ಮೊದಲಾದವರಿದ್ದರು. ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಅಸೋಸಿಯೇಷನ್ ವತಿಯಿಂದ 2 ದಿನಗಳ ಕಾಲ ನಡೆಯುವ ರಾಜ್ಯ ಮುಕ್ತ ಫಿಡೆ ರೇಟೆಡ್ ರಾಪಿಡ್ ಮತ್ತು ಬ್ರಿಟ್ಸ್ ಚೆಸ್ ಚಾಂಪಿಯನ್‌ಶಿಪ್-2025 ಕುದ್ಮಲ್ ರಂಗರಾವ್ ಪುರಭವನದಲ್ಲಿ ಶನಿವಾರ ಆರಂಭಗೊಂಡಿತು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ಅಧ್ಯಕ್ಷ ಭಾಸ್ಕರ್ ರೈ ಕಟ್ಟ ಉದ್ಘಾಟಿಸಿ ಮಾತನಾಡಿ, ಚೆಸ್ ಅಂದರೆ ಕೇವಲ ಆಟವಲ್ಲ, ಅದು ಆಲೋಚನಾ ಶಕ್ತಿಯ ಕಲೆಯಾಗಿದೆ. ಇಲ್ಲಿ ದೈಹಿಕ ಶಕ್ತಿ ಪ್ರದರ್ಶನಕ್ಕೆ ಅವಕಾಶ ಇಲ್ಲ. ಬೌದ್ಧಿಕ ಬಲ, ಚಿಂತನೆ, ಆಲೋಚನಾ ಶಕ್ತಿಯಿಂದ ಎದುರಾಳಿಯನ್ನು ಹೆಣೆಯುವ ಕಾರ್ಯಕ್ಷಮತೆ ಮುಖ್ಯ ಎಂದರು. ದ.ಕ ಜಿಲ್ಲಾ ಚೆಸ್ ಅಸೋಸಿಯೇಷನ್‌ನ ಗೌರವಾಧ್ಯಕ್ಷ ಸುನೀಲ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷೆ ಡಾ.ಅಮರಶ್ರೀ ಅಮರ್‌ನಾಥ ಶೆಟ್ಟಿ ಸ್ವಾಗತಿಸಿದರು. ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ರಮೇಶ್ ಕೋಟೆ ಹಾಗೂ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಮಂಜುನಾಥ್ ಆಚಾರ್, ಸಲಹೆಗಾರ ಸಾಕ್ಷಾತ್, ಉಪಾಧ್ಯಕ್ಷ ನಾರಾಯಣ್ ಎಲ್. ಮೊದಲಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷೆ ವಾಣಿ ಎಸ್.ಪಣಿಕ್ಕರ್ ನಿರ್ವಹಿಸಿದರು. ವಿಶೇಷ ಮಕ್ಕಳ ವಿಭಾಗದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಗುರುತಿಸಿಕೊಂಡಿರುವ ಬಂಟ್ವಾಳ ತಾಲೂಕಿನ ಯಶಸ್ವಿ ಅವರನ್ನು ಗೌರವಿಸಲಾಯಿತು.

