ಉಡುಪಿ: ಮಣಿಪಾಲ ವಿದ್ಯಾರತ್ನ ನಗರದ ಡಿಸಿ ಕಚೇರಿ ರಸ್ತೆಯಲ್ಲಿ ಕಾರ್ಯಾಚರಿಸುತ್ತಿದ್ದ ಕೆಫೆ ಮೇಲೆ ಮಣಿಪಾಲ ಠಾಣಾ ಪೊಲೀಸರು ದಿಢೀರ್ ದಾಳಿ ನಡೆಸಿ, ಅಕ್ರಮವಾಗಿ ಹುಕ್ಕಾ ಪೂರೈಕೆ ಮಾಡುತ್ತಿದ್ದ ಮ್ಯಾನೇಜರ್ ಹಾಗೂ ಹುಕ್ಕಾ ಸೇವಿಸುತ್ತಿದ್ದ 8 ಮಂದಿ ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಖಚಿತ ಮಾಹಿತಿ ಆಧರಿಸಿ ದಾಳಿ: ಕೆಫೆಯಲ್ಲಿ ಅಕ್ರಮವಾಗಿ ಹುಕ್ಕಾ ಸೇವನೆ ನಡೆಯುತ್ತಿರುವ ಬಗ್ಗೆ ಬಂದ ಖಚಿತ ಸಾರ್ವಜನಿಕ ಮಾಹಿತಿಯಂತೆ ಮಣಿಪಾಲ ಪೊಲೀಸ್ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತು. ಈ ವೇಳೆ ಕೆಫೆಯ ಒಳಗಡೆ ಟೇಬಲ್ ಮೇಲಿಟ್ಟಿದ್ದ ಹುಕ್ಕಾ ಶೀಸೆಗಳ ಮೂಲಕ ಯುವಕರು ಹುಕ್ಕಾ ಸೇವಿಸುತ್ತಿರುವುದು ಕಂಡುಬಂದಿದೆ.
ಕುಂದಾಪುರದ ಎಸ್. ರೀಯಾಜ್, ಬೈಂದೂರಿನ ಜೀಶಾನ್ ಅಬ್ದುಲ್ ಜಾಹೀರ್, ಗಂಗೊಳ್ಳಿಯ ಮೊಹಮ್ಮದ್ ಸಮೀರ್, ಉಡುಪಿಯ ಮಹಮ್ಮದ್ ಸವಾದ್, ಕೃಷ್ಣ, ಚಿರಾಗ್, ಅನ್ವೀತ್ ಹಾಗೂ ಕಾಪುವಿನ ತಾರನಾಥ್ ಎಂಬವರನ್ನು ಪೊಲೀಸರು ವಿಚಾರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಹುಕ್ಕಾ ಪೂರೈಸುತ್ತಿದ್ದ ಕೆಫೆಯ ಮ್ಯಾನೇಜರ್, ಕ್ಯಾಶಿಯರ್ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಣ್ಣೂರು ಗ್ರಾಮದ ತೋಟ ಹೌಸ್ ನಿವಾಸಿ ಮೊಹಮ್ಮದ್ ಶಫಾನ (22) ಎಂಬಾತನನ್ನು ಬಂಧಿಸಲಾಗಿದೆ.
ಸ್ಥಳದಲ್ಲಿದ್ದ ಹುಕ್ಕಾ ಸಾಮಗ್ರಿಗಳನ್ನು ವಶಪಡಿಸಿಕೊಂಡು ಮಹಜರು ನಡೆಸಲಾಗಿದ್ದು, ಮ್ಯಾನೇಜರ್ ಹಾಗೂ ಹುಕ್ಕಾ ಸೇವಿಸುತ್ತಿದ್ದ 8 ಮಂದಿ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

