ಮೊನ್ನೆ ದಿನ ಒಬ್ಬ ರೋಗಿ ವಿಪರೀತ ಹಲ್ಲು ನೋವಿನಿಂದ ಮುಖ ಮುಚ್ಚಿಕೊಂಡು ದಂತ ಚಿಕಿತ್ಸಾಲಯಕ್ಕೆ ಬಂದಿದ್ದ. ಬಂದವನೇ ನೇರವಾಗಿ ಚಿಕಿತ್ಸಾಲಯದ ಒಳಬಂದು ದಂತ ಕುರ್ಚಿಯ ಮೇಲೆ ಆಸೀನವಾಗಿ ಬಹಳ ದೈನ್ಯವಾಗಿ ಡಾಕ್ಟ್ರೇ ವಿಪರೀತ ತಡೆದುಕೊಳ್ಳಲಾಗದಷ್ಟು ಹಲ್ಲು ನೋವು ಇದೆ. ಬೇಗನೆ ಸಿಸೇರಿಯನ್ ಮಾಡಿ ಹಲ್ಲು ತೆಗೆದುಬಿಡಿ ಎಂದು ನನ್ನ ಕಾಲು ಹಿಡಿದಿದ್ದ. ನನಗೆ ಒಂದು ಕಡೆ ನಗು, ಇನ್ನೊಂದೆಡೆ ರೋಗಿಯ ಮುಗ್ದತನವನ್ನು ಕಂಡು ಕರುಣೆ ಉಕ್ಕಿ ಬರುತ್ತಿತ್ತು. ಕ್ಷಣಾರ್ಧದಲ್ಲಿ ಅರಿವಳಿಕೆ ಚುಚ್ಚು ಮದ್ದು ನೀಡಿ ಆತನ ಹಲ್ಲನ್ನು ತೆಗೆದು ಹಾಕಿದಾಗ ಆತ ಆನಂದ ಬಾಷ್ಪ ಸುರಿಸುತ್ತಿದ್ದ. ಇಂತಹಾ ರೋಗಿಗಳು ತಿಂಗಳಲ್ಲಿ ಒಂದೆರಡಾದರೂ ಬರುತ್ತದೆ. ನಮ್ಮಂತಹಾ ದಂತ ವೈದ್ಯರಿಗೂ ತಿಂಗಳಲ್ಲಿ ಒಂದೆರಡು ಸಿಸೇರಿಯನ್ ಭಾಗ್ಯ ಇಂತಹಾ ರೋಗಿಗಳಿಂದ ಒದಗಿ ಬಂದಿದೆ. ಈ ಸಿಸೇರಿಯನ್ ಎನ್ನುವುದು ವಿಪರೀತ ನೋವಿರುವಾಗ ನೋವು ನಿವಾರಣೆಗೆ ಮಾಡುವ ಆಪರೇಷನ್‍ನ ಅನ್ವರ್ಥನಾಮವಾಗಿ ಬೆಳೆದು ಬಂದಿದೆ ಎಂದರೂ ತಪ್ಪಾಗಲಾರದು.
ಏನಿದು ಸಿಸೇರಿಯನ್ ಸರ್ಜರಿ?
ಸಾಮಾನ್ಯವಾಗಿ ಕಾರಣಾಂತರಗಳಿಂದ ಸಹಜ ಹೆರಿಗೆ ಆಗದಿದ್ದಲ್ಲಿ ಸರ್ಜರಿ ಮುಖಾಂತರ ಮಗುವನ್ನು ಗರ್ಭಕೋಶದಿಂದ ಹೊರತೆಗೆಯುವುದನ್ನು ಸಿಸೇರಿಯನ್ ಸರ್ಜರಿ ಎನ್ನುತ್ತಾರೆ. ಇದನ್ನು ಸಿ-ಸೆಕ್ಷನ್ ಅಥವಾ ಸಿಸೇರಿಯನ್ ಸೆಕ್ಷನ್ ಅಂತಲೂ ಕರೆಯುತ್ತಾರೆ.
ಸಿಸೇರಿಯನ್ ಹೆಸರಿನ ಇತಿಹಾಸ
ರೋಮನ್ ದೊರೆ ಜೂಲಿಯಸ್ ಸೀಸರ್ ಹುಟ್ಟಿದು ಸರ್ಜರಿ ಮುಖಾಂತರ. ಆತನನ್ನು ತಾಯಿಯ ಹೊಟ್ಟೆ ಕೊಯ್ದು ಹೊರ ತೆಗೆಯಲಾಯಿತು ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಅವನಿಂದಾಗಿಯೇ ಈ ಶಸ್ತ್ರ ಚಿಕಿತ್ಸೆಗೆ ಸಿಸೇರಿಯನ್ ಎಂಬ ಹೆಸರು ಬಂತು ಎಂಬುದಾಗಿ ಇತಿಹಾಸಕಾರರು ಸಮಜಾಯಷಿ ನೀಡುತ್ತಾರೆ. ಆಕ್ಸ್ಫರ್ಡ್ ನಿಘಂಟನಲ್ಲಿಯೂ ಇದೇ ಉಲ್ಲೇಖವಿದೆ. ಇದರ ಸತ್ಯಾಸತ್ಯತೆ ಬಗ್ಗೆ ಎಲ್ಲರಿಗೂ ಸಂಶಯ ಇದ್ದೇ ಇದೆ. ಯಾಕೆಂದರೆ ಪ್ರಾಚೀನ ಕಾಲದಲ್ಲಿ ಜೀವಂತ ಹೆಂಗಸರ ಮೇಲೆ ಸಿಸೇರಿಯನ್ ಆಪರೇಷನ್ ಮಾಡುವ ಕ್ರಮ ಇರಲಿಲ್ಲ. ಕಾರಣಾಂತರದಿಂದ ಹೆರಿಗೆ ವಿಫಲವಾಗಿ ಬಸುರಿ ಸತ್ತರೆ, ಆಕೆಯ ಹೊಟ್ಟೆಯನ್ನು ಕೊಯ್ದು ಮಗುವನ್ನು ಹೊರ ತೆಗೆಯುವ ಪದ್ಧತಿ ಇತ್ತು. ಜೀವಂತ ಮಗುವನ್ನು ಮೃತ ತಾಯಿಯ ದೇಹದೊಡನೆ ಮಣ್ಣು ಮಾಡಬಾರದು ಎಂಬುದೇ ಈ ಕ್ರಿಯೆಯ ಉದ್ದೇಶ. ಜೂಲಿಯಸ್ ಸೀಸರ್‍ನನ್ನು ಹೀಗೆ ಜಗತ್ತಿಗೆ ತಂದಿದ್ದೇ ಆದಲ್ಲಿ, ಆತನ ಜನನಕ್ಕೂ ಪೂರ್ವದಲ್ಲಿ ಆತನ ತಾಯಿ ಮೃತಳಾಗಬೇಕಿತ್ತು ಆದರೆ ಸೀಸರ್‍ನ ತಾಯಿ ಅರೇರಿಯಾ ಆತ ಪಟ್ಟಕ್ಕೇರುವ ಹೊತ್ತಿನಲ್ಲಿಯೂ ಜೀವಂತವಿದ್ದಳು. ಹಾಗಾಗಿ ಸೀಸರ್‍ನನ್ನು ಆತನ ತಾಯಿಯ ಹೊಟ್ಟೆ ಸಿಗಿದು ಹೊರ ತೆಗೆಯಲಾಯಿತು ಎಂಬುದನ್ನು ನಂಬಲು ಸೂಕ್ತ ಆಧಾರಗಳಿಲ್ಲ. ಕ್ರಿ.ಶ 17ನೇ ಶತಮಾನದವರೆಗೆ ಜೀವಂತ ಬಸುರಿಯ ಹೊಟ್ಟೆ ಸಿಗಿಯುವ ಪದ್ಧತಿ ಇರಲಿಲ್ಲ. ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮುಖಾಂತರ ತಾಯಿ ಮತ್ತು ಮಗುವನ್ನು ಉಳಿಸಿಕೊಳ್ಳಲು ಸಾಧ್ಯತೆ ಹುಟ್ಟಿದ್ದು. 17ನೇ ಶತಮಾನದ ನಂತರವೇ. ಮಗುವನ್ನು ಹೊರ ತೆಗೆಯುವ ಸಮಯದಲ್ಲಿ ಹೊಟ್ಟೆಯನ್ನು ಕೊರೆಯುವ ಗಾಯದ ಆಕಾರ, ಇಂಗ್ಲೀಷ್ ‘ಸಿ’ ಅಕ್ಷರದ ಆಕಾರದಲ್ಲಿ ಕಾಣುವುದರಿಂದ ಇದಕ್ಕೆ ‘ಸಿ’ ಸೆಕ್ಷನ್ ಎಂಬ ಅನ್ವರ್ಥನಾಮ ಬಂದಿದೆ. ಇನ್ನೊಂದು ಇತಿಹಾಸದ ಪ್ರಕಾರ ಸಿಸೇರಿಯನ್ ಆಪರೇಷನ್‍ನಲ್ಲಿ ಸಾಮಾನ್ಯವಾಗಿ ತಾಯಿ ಮರಣವನ್ನು ಅಪ್ಪುತ್ತಾಳೆ. ಮಗುವನ್ನು ಉಳಿಸುವ ಸಲುವಾಗಿಯೇ ತಾಯಿಯ ಹೊಟ್ಟೆಯನ್ನು ಸೀಳಲಾಗುತ್ತದೆ ಎಂದು ವಿವರಣೆ ನೀಡಲಾಗಿದೆ. ಎರಡನೇ ಮಯೂರ ಸಾಮ್ರಾಟ ಬಿಂದುಸಾರನ ತಾಯಿ ತುಂಬು ಗರ್ಭಿಣಿಯಾಗಿರುವಾಗ ತಪ್ಪು ಗ್ರಹಿಕೆಯಿಂದ ವಿಷಪ್ರಾಶನ ಮಾಡಿದಾಗ, ತಾಯಿ ಸತ್ತರೂ ಪರವಾಗಿಲ್ಲ, ಮಗು ಉಳಿಯಲಿ ಎಂಬ ಉದ್ದೇಶದಿಂದ ಚಂದ್ರಗುಪ್ತನ ಗುರುವಾದ ಚಾಣಕ್ಯರ ಆದೇಶದಂತೆ ತಾಯಿಯ ಹೊಟ್ಟೆಯನ್ನು ಸೀಳಿ ಮಗುವನ್ನು ಉಳಿಸಿಕೊಳ್ಳಲಾಯಿತು ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಇದು ಕ್ರಿ.ಪೂ 320ರಲ್ಲಿ ನಡೆದ ಘಟನೆ. ಒಟ್ಟಿನಲ್ಲಿ ಇತಿಹಾಸದ ಪುಟಗಳಲ್ಲಿ ತಾಯಿಯ ಗರ್ಭವನ್ನು ಸೀಳಿ ಮಗುವನ್ನು ಉಳಿಸಿಕೊಳ್ಳುವ ಪರಿಪಾಠ ಇತ್ತು ಎಂಬುದು ಹಲವಾರು ಬಾರಿ ದಾಖಲಾಗಿದೆ.
ಮೊದಲ ಯಶಸ್ವಿ ಸಿಸೇರಿಯನ್ ಆಪರೇಷನ್ ಅಮೇರಿಕಾ ದೇಶದ ವರ್ಜಿನಿಯಾದಲ್ಲಿ 1794ರಲ್ಲಿ ನಡೆಯಿತು. ಈ ಸಿಸೇರಿಯನ್ ಆಪರೇಷನ್ ಡಾ|| ಜೆಸ್ಸಿ ಬೆನೆಟ್ ಎಂಬವರು ಆತನ ಪತ್ನಿ ಎಲಿಜಿಬೆಟ್ ಎಂಬಾಕೆ ಮೇಲೆ ನಡೆಸಿದ ಎಂದೂ ಇತಿಹಾಸದ ಪುಟಗಳಿಂದ ತಿಳಿದು ಬಂದಿದೆ.
ಯಾವಾಗ ಮಾಡುತ್ತಾರೆ?
- ಸಹಜ ಹೆರಿಗೆಯಾಗುವ ಸಾಧ್ಯತೆ ಇಲ್ಲವಾದಾಗ ಅಥವಾ ಸಹಜ ಹೆರಿಗೆಯಿಂದ ಮಗು ಅಥವಾ ತಾಯಿಯ ಜೀವಕ್ಕೆ ಅಪಾಯವಿದೆ ಎಂದಾಗ ವೈದ್ಯರು ಸಿಸೇರಿಯನ್ ಸರ್ಜರಿಗೆ ಸೂಚಿಸುತ್ತಾರೆ.
- ತಾಯಿಯ ರಕ್ತದೊತ್ತಡ ಜಾಸ್ತಿಯಿದ್ದು ಅತಿಯಾದ ರಕ್ತಸ್ರಾವವಾಗುವ ಸಾಧ್ಯತೆ ಇದ್ದಲ್ಲಿ.
- ಅವಳಿ ಮಕ್ಕಳಿದ್ದು ಸಹಜ ಹೆರಿಗೆಯಾಗುವ ಸಾಧ್ಯತೆ ಕಡಿಮೆ ಇದ್ದಲ್ಲಿ.
- ಹೊಕ್ಕುಳ ಬಳ್ಳಿ ಅಥವಾ ಅಂಬಲಿಕಲ್ ಕಾರ್ಡ್ ಮಗುವಿನ ಕುತ್ತಿಗೆ ಸುತ್ತ ಸುತ್ತಿಕೊಂಡು ಸಹಜ ಹೆರಿಗೆಯಿಂದ ಮಗುವಿನ ಜೀವಕ್ಕೆ ತೊಂದರೆ ಇದ್ದಾಗ.
- ಮಗುವಿನ ತಲೆಯ ಗಾತ್ರ ದೊಡ್ಡದಾಗಿದ್ದಲ್ಲಿ ಅಥವಾ ಇನ್ನಾವುದೇ ಕಾರಣವಿದ್ದಲ್ಲಿ
- ತಾಯಿಯ ಕೋರಿಕೆ ಮೇರೆಗೆ ಮತ್ತು ಸಿಸೇರಿಯನ್ ಸರ್ಜರಿಗೆ ಒಪ್ಪಿಗೆ ನೀಡಿದಾಗ.
- ಸಹಜ ಹೆರಿಗೆಯ ಸಮಯದಲ್ಲಿ ತಲೆಯ ಭಾಗ ಮೊದಲು ಬರುತ್ತದೆ ನಂತರ ಕಾಲುಗಳ ಭಾಗ ಬರುತ್ತದೆ. ಆದರೆ ಕಾರಣಾಂತರಗಳಿಂದ ಗರ್ಭಕೋಶದೊಳಗೆ ಮಗು ಬೇರೆಯೇ ರೀತಿಯಲ್ಲಿ ಇದ್ದಲ್ಲಿ, ತಲೆಯ ಭಾಗ ಮೇಲ್ಭಾಗದಲ್ಲಿ ಇದ್ದಲ್ಲಿ, ಸಹಜ ಹೆರಿಗೆಯ ಸಾಧ್ಯತೆ ಕಡಿಮೆ ಇರುತ್ತದೆ ಮತ್ತು ಮಗುವಿಗೆ ಉಸಿರಾಟದ ತೊಂದರೆ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಸಿ-ಸೆಕ್ಷನ್ ಮಾಡಲು ವೈದ್ಯರು ನಿರ್ಧರಿಸುತ್ತಾರೆ.
ಒಟ್ಟಿನಲ್ಲಿ ತಾಯಿಯ ಆರೋಗ್ಯಸ್ಥಿತಿ, ಮನೋಸ್ಥಿತಿ, ಗರ್ಭಕೋಶದ ಆಕೃತಿ, ಗಾತ್ರ, ಮಗುವಿನ ಗಾತ್ರ, ಮಗು ಮಲಗಿರುವ ರೀತಿ, ತಾಯಿಯ ಜನನಾಂಗದ ರಚನೆ, ಸ್ಕ್ಯಾನ್‍ಗಳಲ್ಲಿ ಕಂಡುಬಂದ ಹುಟ್ಟುವ ಮಗುವಿನ ಚಲನೆ, ದೇಹಸ್ಥಿತಿ ಇವೆಲ್ಲವನ್ನು ವೈದ್ಯರು ಕೂಲಂಕುಷವಾಗಿ ತಾಳೆ ಹಾಕಿ ತಾಯಿ ಮತ್ತು ಮಗುವಿನ ಆರೋಗ್ಯದ ಹಿತ ದೃಷ್ಟಿಯಿಂದ ಸಿಸೇರಿಯನ್ ಸರ್ಜರಿ ಮಾಡಲು ಅಥವಾ ಸಹಜ ಹೆರಿಗೆಯಾಗಬೇಕೋ ಎಂಬುದರ ನಿರ್ಣಯವನ್ನು ರೋಗಿಯ ಸಂಬಧಿಕರ ಜೊತೆ ಚರ್ಚಿಸಿ, ವಿಮರ್ಷಿಸಿ ಸೂಕ್ತ ನಿರ್ಣಯವನ್ನು ಸಕಾಲದಲ್ಲಿ ವೈದ್ಯರು ತೆಗೆದು ಕೊಳ್ಳುತ್ತಾರೆ.
ಸಿಸೇರಿಯನ್ ಸೆಕ್ಷನ್ ಹೇಗೆ ಮಾಡುತ್ತಾರೆ?
ಸಾಮಾನ್ಯವಾಗಿ 45 ನಿಮಿಷದಿಂದ ಒಂದು ಗಂಟೆ ತಗಲುವ ಈ ಆಪರೇಷನ್ ಸಂಪೂರ್ಣ ಸಾಮಾನ್ಯ ಅರಿವರಿಕೆ ಅಂದರೆ ಜನರಲ್ ಅನಸ್ತೆಸೀಯಾ ಅಥವಾ ಸ್ಪೈನಲ್ ಅನಸ್ತೆಸೀಯಾ ನೀಡಿ ಮಾಡಲಾಗುತ್ತದೆ. ಸ್ಪೈನಲ್ ಅನಸ್ತೇಸಿಯಾ ನೀಡಿದಾಗ ರೋಗಿಗೆ ಅಪರೇಷನ್‍ನ ಮಾಡುವಾಗ ರೋಗಿ ಎಚ್ಚೆತ್ತುಕೊಂಡಿರುತ್ತಾರೆ. ಹೊಟ್ಟೆಯ ಕೆಳಭಾಗವನ್ನು ಆಂಟಿಸೆಪ್ಟಿಕ್ ಔಷಧಿಯಿಂದ ಸ್ವಚ್ಛಗೊಳಿಸಿದ ಬಳಿಕ ಸುಮಾರು 6 ಇಂಚಿನಷ್ಟು (15cm) ಉದ್ದದ ಹೊಟ್ಟೆಯ ಭಾಗವನ್ನು ಅಡ್ಡವಾಗಿ ಚರ್ಮದ ಭಾಗದಲ್ಲಿ ಮಾತ್ರ ಕೊಯ್ಯಲಾಗುತ್ತದೆ. ಚರ್ಮದ ಕೆಳಭಾಗದಲ್ಲಿ ಇನ್ನೊಂದು ಗಾಯದ ಮುಖಾಂತರ ಗರ್ಭಕೋಶವನ್ನು ತೆರೆದು ಮಗುವನ್ನು ಹೊರ ತೆಗೆಯಲಾಗುತ್ತದೆ. ಹೀಗೆ ಕೇವಲ 2 ಗಾಯಗಳಿಂದ ಮಗುವನ್ನು ಹೊರತೆಗೆಯಲಾಗುತ್ತದೆ. ಆ ಬಳಿಕ ಹೊಟ್ಟೆಯ ಭಾಗವನ್ನು ಹೊಲಿಯಲಾಗುತ್ತದೆ. ಅಪರೇಷನ್ ಥಿಯೇಟರ್‍ನಿಂದ ಹೊರಬಂದ ಕೂಡಲೇ ಮಗುವಿಗೆ ಹಾಲುಣಿಸಲು ಆರಂಭಿಸಲಾಗುತ್ತದೆ. ಆದರೆ ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿ ಉಳಿಯಬೇಕಾದ ಅವಶ್ಯಕತೆ ಇರುತ್ತದೆ. ಸಾಮಾನ್ಯವಾಗಿ ಗರ್ಭಧರಿಸಿದ 39 ವಾರಗಳ ಒಳಗೆ ವೈದ್ಯಕೀಯ ಕಾರಣಗಳಿಲ್ಲದೆ ಸಿಸೇರಿಯನ್ ಆಪರೇಷನ್ ಮಾಡುವುದು ನಿಷಿದ್ಧವಾಗಿದೆ. ಸಿಸೇರಿಯನ್ ಮಾಡಿದ ಬಳಿಕ ಕನಿಷ್ಠ 5ರಿಂದ 6 ವಾರಗಳ ಕಾಲ ಗಾಯ ಸಂಪೂರ್ಣವಾಗಿ ಒಣಗಲು ಸಮಯ ಬೇಕಾಗುತ್ತದೆ.
ಕೊನೆ ಮಾತು
2012ರಲ್ಲಿ ವಿಶ್ವದಾದ್ಯಂತ 23 ಮಿಲಿಯನ್ ಸಿಸೇರಿಯನ್ ಆಪರೇಷನ್ ನಡೆದಿದೆ. 2017ರಲ್ಲಿ ಅಮೇರಿಕಾ ದೇಶವೊಂದರಲ್ಲಿಯೇ 32 ಶೇಕಡಾ ತಾಯಂದಿರು ಸಿಸೇರಿಯನ್ ಆಪರೇಷನ್ ಮಾಡಿಸಿಕೊಂಡಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿಯಬಹುದು. ಸಾಮಾನ್ಯವಾಗಿ 10ರಿಂದ 15ಶೇಕಡಾ ಸಿಸೇರಿಯನ್ ಹೆರಿಗೆ ಆಗುವುದು ಸರ್ವೇಸಾಮಾನ್ಯ ಎಂದು ಅಂತರಾಷ್ಟ್ರೀಯ ದಾಖಲೆಯಿಂದ ತಿಳಿದು ಬಂದಿದೆ. ಸುಮಾರು 45 ರಾಷ್ಟ್ರಗಳಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ 8 ಶೇಕಡಾ ಇದ್ದಲ್ಲಿ, ಇನ್ನುಳಿದ 55 ಶೇಕಡಾ ದೇಶಗಳಲ್ಲಿ ಸಿಸೇರಿಯನ್ ಪ್ರಮಾಣ 27 ಶೇಕಡಾಕ್ಕಿಂತಲೂ ಜಾಸ್ತಿಇದೆ. ಇತ್ತೀಚಿನ ದಿನಗಲ್ಲಿ ಸಿಸೇರಿಯನ್ ಆಪರೇಶನ್‍ಗಳ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ದೂರುಗಳು ಕೇಳಿಬರುತ್ತಿದೆ. ಸಿಸೇರಿಯನ್ ಹೆರಿಗೆ ಬಗ್ಗೆ ಕ್ರಿಸ್ತ ಪೂರ್ವ 320ರಲ್ಲಿಯೇ ಉಲ್ಲೇಖ ಚರಿತ್ರೆಗಳಲ್ಲಿ ದಾಖಲಾಗಿದೆ. ಮಯೂರ ಸಾಮ್ರಾಟರಾದ ಬಿಂದುಸಾರ ಚಕ್ರವರ್ತಿಯ ತಾಯಿ ಆತನ ಗರ್ಭಧರಿಸಿದ ಸಮಯದಲ್ಲಿ ವಿಷ ಸೇವಿಸಿದ್ದಳಂತೆ. ಆಗ ಚಂದ್ರಗುಪ್ತನ ಗುರುಗಳಾದ ಚಾಣಕ್ಯರು ಮಗು ಬದುಕಬೇಕು ಎಂದು ಬಂದುಸಾರನ ತಾಯಿಯ ಹೊಟ್ಟೆಯನ್ನು ಸಿಗಿದು, ಮಗುವನ್ನು ಹೊರತೆಗೆಸಿದರು ಎಂದು ಚರಿತ್ರೆಗಳಲ್ಲಿ ದಾಖಲಾಗಿದೆ. ಹಿಂದಿನ ಕಾಲದಲ್ಲಿ ಸರಿಯಾದ ಆಂಟಿಬಯಾಟಿಕ್‍ಗಳು ಮತ್ತು ಆಂಟಿ ಸೆಪ್ಟಿಕ್‍ಗಳ ಸಮರ್ಪಕ ಬಳಿಕ ಇಲ್ಲದ ಕಾರಣದಿಂದ ಸಾಮಾನ್ಯವಾಗಿ ಸಿಸೇರಿಯನ್ ಸರ್ಜರಿ ಬಳಿಕ ಉಂಟಾದ ಸೋಂಕಿನಿಂದ ಸಾವಿನ ಪ್ರಮಾಣ ಹೆಚ್ಚಾಗಿತ್ತು. ಕ್ರಮೇಣ ತಂತ್ರಜ್ಞಾನದ ಅಭಿವೃದ್ಧಿ, ವೈದ್ಯಕೀಯ ಕೌಶಲ್ಯ ವೃಧ್ಧಿ, ನುರಿತ ವೈದ್ಯರ ಲಭ್ಯತೆ, ರಕ್ತಪೂರಣದ ವ್ಯವಸ್ಥೆ, ಆಂಟಿಬಟೋಟಿಕ್ ಲಭ್ಯತೆ ಮತ್ತು ಅನಸ್ತೇಸಿಯಾದಲ್ಲಿ ಉಂಟಾದ ಬದಲಾವಣೆಗಳಿಂದ ಸಿಸೇರಿಯನ್ ಸರ್ಜರಿಯಲ್ಲಿನ ಸಾವಿನ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ಒಟ್ಟಿನಲ್ಲಿ ಸಿಸೇರಿಯನ್ ಸರ್ಜರಿ ಎನ್ನುವುದು ಸಹಜ ಹೆರಿಗೆಯಾಗುವ ಸಾಧ್ಯತೆ ಕಡಿಮೆ ಇದ್ದಾಗ, ತಾಯಿ ಮತ್ತು ಮಗುವಿನ ಸುರಕ್ಷತೆಗೆ ಪೂರಕವಾಗಿಸುವ ಸರ್ಜರಿ ಆಗಿದ್ದು ವೈದ್ಯರು ಸಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡು ತಾಯಿಮಗುವಿನ ಸುರಕ್ಷತೆಗೆ ಆಧ್ಯತೆ ನೀಡುತ್ತಾರೆ.
ಡಾ| ಮುರಲೀ ಮೋಹನ್ ಚೂಂತಾರು
BDS MDS DNB MBA MOSRCSEd
ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು

