ಕೋಣಂದೂರು: ಸಮೀಪದ ಹುಂಚದಕಟ್ಟೆ ಗ್ರಾಮದ ರಾಮನಸರದ ನಾಗದೇವತೆ, ಚೌಡೇಶ್ವರಿ ಪರಿವಾರ ದೇವತೆಗಳ 20ನೇ ವರ್ಷದ ಸುಬ್ರಮಣ್ಯ ಷಷ್ಠಿ ದೀಪೋತ್ಸವ ಮತ್ತು ಜಾತ್ರಾ ಮಹೋತ್ಸವ ನ. 26ರಂದು ನಡೆಯಲಿದೆ. ಅಂದು ಬೆಳಿಗ್ಗೆ 9ಕ್ಕೆ ನಾಗದೇವತೆಗೆ ವಿಶೇಷ ಹೂವಿನ ಅಲಂಕಾರ, ಗಣಪತಿ ಹೋಮ, ಕಲಾಹೋಮ, 108 ಕಳಶಾಭಿಷೇಕ, ಪರಿವಾರ ದೇವತೆಗಳಿಗೆ ವಿಶೇಷ ಪೂಜೆ ನಡೆಯಲಿದೆ. 12 ಗಂಟೆಗೆ ಗಣಪತಿ ಹೋಮ, ಕಲಾಹೋಮ ಪೂರ್ಣಾಹುತಿ ನಡೆಯಲಿದೆ.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕು ಸತೇನಹಳ್ಳಿ ಶಿವಾಲಿ ಬಸವೇಶ್ವರ ಮೂಕಪ್ಪ ಸ್ವಾಮಿಯ ಪವಾಡ ದರ್ಶನ ಜರುಗಲಿದೆ. ಹೊಸನಗರ ತಾಲ್ಲೂಕು ವಸವೆ ವನದುರ್ಗಾ ಪರಮೇಶ್ವರಿ ಅಮ್ಮನವರ ಪಲ್ಲಕ್ಕಿ, ಸುತ್ತೆ ಗಡಿದುರ್ಗಿ ಅಮ್ಮನವರ ಪಲ್ಲಕ್ಕಿ, ತೀರ್ಥಹಳ್ಳಿ ತಾಲ್ಲೂಕು ರಂಜದಕಟ್ಟೆ ಚಾಮುಂಡೇಶ್ವರಿ ಹೊನ್ನತ್ತಮ್ಮ ಮತ್ತು ಗುಳ್ಳೆ ಮಾರಿಯಮ್ಮ ಪಲ್ಲಕ್ಕಿ, ಮೇಲಿನ ಹೊನ್ನಾನಿ ಹುಣಸವಳ್ಳಿ ಬನ್ನಿ ಮಹಾಂಕಾಳಿ ಅಮ್ಮನವರು, ಶಿವಮೊಗ್ಗದ ಚೋರಡಿಯ ಹಾಲ್ಕುಣಿ ಚಂಡಿಕೇಶ್ವರಿ ಅಮ್ಮನವರ ಪಲ್ಲಕ್ಕಿ ಉತ್ಸವ ನಡೆಯಲಿದೆ. ರಾತ್ರಿ 7 ಗಂಟೆಯಿಂದ ಆಶ್ಲೇಷ ಬಲಿ, ಮಹಾಮಂಗಳಾರತಿ ಮತ್ತು ದೀಪೋತ್ಸವ ನಡೆಯಲಿದೆ. ಅನ್ನ ಸಂತರ್ಪಣೆ ಇದೆ. ಪೂಜಾ ವಿಧಿವಿಧಾನಗಳನ್ನು ಗುರುಗಳಾದ ಮುರಳೀಧರ ಕೆದ್ಲಾಯ ಹೆಗ್ಡೆಕೆರೆ, ಅರ್ಚಕರಾದ ಸುರೇಶ್ ಭಟ್, ಶಂಕರ ಭಟ್ ಮತ್ತು ರಮೇಶ್ ಭಟ್, ದೇವಸ್ಥಾನದ ಸಿಬ್ಬಂದಿ ನೆರವೇರಿಸುವರು. ರಾತ್ರಿ 8 ಗಂಟೆಗೆ ಸಿಡಿಮದ್ದು ಪ್ರದರ್ಶನ, ರಾತ್ರಿ 10 ಗಂಟೆಗೆ ಅನಂತ ಪದ್ಮನಾಭ ದಶಾವತಾರ ಯಕ್ಷಗಾನ ಮೇಳ ಪೆರ್ಡೂರು ಅವರಿಂದ ‘ನಾಗವಲ್ಲಿ ಕಥಾಹಂದರ’ ಯಕ್ಷಗಾನ ನಡೆಯಲಿದೆ ಎಂದು ದೇವಸ್ಥಾನ ವ್ಯವ-ಸ್ಥಾಪಕರಾದ ಸುನಂದಮ್ಮ, ನಾಗರಾಜ್, ಚಂದ್ರಶೇಖರ್ (ಪುಟ್ಟ), ಮನ್ಮಥ ತಿಳಿಸಿದ್ದಾರೆ.

