ಕಾಲಾವಧಿ ಜಾರ್ದೆ ಮಾರಿಪೂಜೆಯ ಸಂದರ್ಭದಲ್ಲಿ ಹಿರಿಯ ಕನ್ನಡ ಚಲನಚಿತ್ರ ನಟ ರಮೇಶ್ ಭಟ್ ಅವರು ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ಕ್ಷೇತ್ರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವಿಯ ದರುಶನ ಪಡೆದು, ಇಷ್ಟಾರ್ಥ ಸಿದ್ಧಿಗಾಗಿ ಘಂಟಾನಾದ ಸೇವೆಯನ್ನು ನೆರವೇರಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಲಾಯಿತು.
ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅಮ್ಮನ ಅನುಗ್ರಹ ಪ್ರಸಾದ ನೀಡಿದರು.
ಈ ಸಂದರ್ಭದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ಈ ದಿನ ನನ್ನ ಜೀವನದಲ್ಲಿ ಮರೆಯಲಾಗದ ದಿನ, ತಾಯಿಯ ದರುಶನ ಮಾಡಿ ಸಂತೋಷದಿಂದ ಕಣ್ಣು ತುಂಬಿ ಬರ್ತಾ ಇದೆ,ಇಂತಹ ಸುಂದರವಾದ ದೇವಸ್ಥಾನದಲ್ಲಿ ಹೆತ್ತ ತಾಯಿಯನ್ನೇ ನೋಡಿದ ಅನುಭವವಾಯಿತು, ತಾಯಿಯ ನುಡಿಯಂತೆ ಇಲ್ಲಿಗೆ ಬಾರದವರು ಬಂದಿದ್ದಾರೆ, ಕೊಡದವರು ಕೊಟ್ಟಿದ್ದಾರೆ, ಅದರಂತೆ ನಾನು ಅದೆಷ್ಟೋ ಬಾರಿ ಇದೆ ದಾರಿಯಿಂದ ಹೋಗಿದ್ದೇನೆ, ಆದರೆ ಇಂದು ಇಲ್ಲಿಗೆ ಬರುವ ಕಾಲ ಕೂಡಿ ಬಂದಿದೆ, ನಾನು ಬಂದಿದ್ದೇನೆ, ನೀವೆಲ್ಲರೂ ಬನ್ನಿ ಎಂದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಭಿವೃದ್ಧಿ ಸಮಿತಿಯ ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಮತ್ತು ಘಂಟಾನಾದ ಸೇವಾ ಸಮಿತಿ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರ ಮಲ್ಲಾರ್, ಪ್ರಚಾರ ಸಮಿತಿ ಸಂಚಾಲಕ ಮತ್ತು ಘಂಟಾನಾದ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಯರಾಮ್ ಆಚಾರ್ಯ, ನವದುರ್ಗಾ ಲೇಖನ ಯಜ್ಞ ಮಹಿಳಾ ಸಮಿತಿಯ ಪ್ರಧಾನ ಕಾರ್ಯಧ್ಯಕ್ಷೆ ಸಾವಿತ್ರಿ ಗಣೇಶ್, ಪ್ರಬಂಧಕ ಗೋವರ್ಧನ್ ಸೇರಿಗಾರ್ ಮತ್ತು ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಉಪಸ್ಥಿತರಿದ್ದರು.

